ಕೆಲಸ ಬಿಟ್ಟಿದ್ದೇನೆ ಅಂದರೆ ಅಮ್ಮ ಖಂಡಿತ ನೊಂದುಕೊಳ್ಳುತ್ತಾಳೆ. ಇಷ್ಟು ಕಷ್ಟ ಪಟ್ಟು ಓದಿಸಿ ಒಂದು ಹಂತಕ್ಕೆ ಬರುತ್ತಿದ್ದಾನೆ ಮಗ ಎಂದು ಆಸೆಗಣ್ಣಿನಿಂದ ಕಾಯುತ್ತಿರುವ ಅಪ್ಪ ಅಮ್ಮನಿಗೆ ಆಘಾತ ಕೊಡುವುದಂತೂ ಸುತಾರಾಂ ಸಾಧ್ಯವಿಲ್ಲದ ಮಾತು. ನಾಳೆಯೇ ಮತ್ತೆ ಬೆಂಗಳೂರಿನ ಬಸ್ಸು ಹಿಡಿಯುವುದೇ ಸರಿ. ಇನ್ನೆಷ್ಟು ದಿನ ಎಂದು ಇಲ್ಲಿಯೇ ಬಿದ್ದಿರಲು ಸಾಧ್ಯ. ಒಂದಲ್ಲ ಒಂದು ದಿನ ಗೊತ್ತಾಗಲೇ ಬೇಕು. ಮಗ ಹೇಳದೇ ತಮ್ಮಿಂದ ಬಚ್ಚಿಟ್ಟಿದ್ದಾನೆ ಎಂಬ ಸತ್ಯ ಗೊತ್ತಾದರೆ ಮತ್ತೂ ನೊಂದುಕೊಳ್ಳೊದಿಲ್ಲವಾ. ಅಪ್ಪನನ್ನು ಹೇಗಾದರೂ ಒಲಿಸಬಹುದು ಆದರೆ ಅಮ್ಮ ..! ಮಗ ಬೆಂಗಳೂರು ಬಿಟ್ಟು ಊರಲ್ಲೇ ತೋಟದ ಕೆಲಸ ಮಾಡುತ್ತಾನೆ ಎಂದರೆ ಆಕೆಯ ಹೃದಯ ತಡೆದುಕೊಳ್ಳುತ್ತದೆಯೇ? ಕಾನೂರಿನ ಯಾವ ಗಂಡು ಹುಡುಗರೂ ಪ್ಯಾಟೆಗೆ ಹೋದವರು ಹಿಂದಿರುಗಿ ಬಂದದ್ದಿಲ್ಲ. ನಾನೊಬ್ಬ ಹೀಗೆ ಬೆಂಗಳೂರು ನನ್ನಿಂದ ಸಾಧ್ಯವಿಲ್ಲ ಎಂದುಕೊಂಡು ಬಂದರೆ ತನ್ನ ಮಗ ಊರಿನಿಂದ ಓಡಿ ಪರಾರಿಯಾದ ಎಷ್ಟೋ ಪುಕ್ಕಲು ಗಂಡಸರಿಗಿಂತ ಅಸಮರ್ಥನಾದನಲ್ಲ ಎಂಬ ನೋವು ಆಕೆಗೆ ಕಾಡದಿರುತ್ತದೆಯೇ. ಅದೇನೋ ಒಂದೆರಡು ತಿಂಗಳಿಗೆ ಅಭ್ಯಾಸವಾಗಬಹುದು. ಆದರೆ ನಾನು ಈ ಹಳ್ಳಿಯ ತೋಟದ ಕೆಲಸಗಳಿಗೆ ಲಾಯಕ್ಕಾದ ಕಸುಬಿಯಂತೂ ಅಲ್ಲ. ಕಲಿಯುತ್ತೇನೆ ಅಂದರೂ ಇಪ್ಪತ್ತೈದರ ಹರೆಯದಲ್ಲಿ ಬೆನ್ನು ಬಗ್ಗುವುದು ಸಾಧ್ಯವಾ. ಒಂದು ಅಡಿಕೆಯನ್ನೂ ಹೆಕ್ಕಿದ ಅಭ್ಯಾಸವಿಲ್ಲ. ಇಂದಾದರೂ ಮಂಗಲೆಯನ್ನು ಮಾತಾಡಿಸುವುದಕ್ಕಾಗಿ ಮೆಟ್ಟಗತ್ತಿ ಮೇಲೆ ಕೂತಿದ್ದು. ಎರಡು ತಾಸು ಕೂತವನಿಗೆ ಬೆನ್ನೆಲುಬಿಗೆ ಕಸು ಹಿಡಿದಂತಾಗಿ ವಾಪಸ್ಸು ಬಂದು ಮಲಗಲಿಲ್ಲವೆ. ಎರಡು ತಾಸಾದರೂ ಸುಲಿದದ್ದು ಮಾತ್ರ ಐವತ್ತೋ ನೂರೋ ಚಾಲಿ ಇರಬಹುದಷ್ಟೇ. ಈ ಪಾಮರನಿಂದ ಕೃಷಿ ಕೆಲಸ ಸಾಧ್ಯವಿಲ್ಲದೇನು ಅನ್ನುವ ಉಮೇದಿಯಲ್ಲಿ ಬೆಂಗಳೂರು ಬಿಟ್ಟು ಬಂದದ್ದಾಯಿತು. ಎಷ್ಟು ದಿವಸ ಈ ಹಳ್ಳಿಯ ಋಣ ನನ್ನ ಮೇಲೆ ಇರುತ್ತದೆಯೋ ನೋಡುವ. ಅಲ್ಲಿಯವರೆಗೆ ಏನಾದರೂ ನೆಪ ಹೇಳಿ ಅಮ್ಮನಿಗೆ ಅನುಮಾನ ಬರದಂತೆ ಇಲ್ಲೇ ಇರುವಂತೆ ನೋಡಿಕೊಳ್ಳಬೇಕಾದದ್ದು ಕಷ್ಟದ ಕೆಲಸ. ಹಾಂ..! ಈ ಲಾಕ್ ಡೌನ್, ಕೊರೋನಾ ಮತ್ತೇನೇನೋ ಹೇಳಿ ಒಂದಾರು ತಿಂಗಳು ಕಂಪನಿಯೆಲ್ಲ ಮುಚ್ಚಿವೆಯೆಂದು ದಿನ ತಳ್ಳುವುದಕ್ಕೆ ಲಾಯಕ್ಕಾಯಿತು. ಮಗ ಸುಳ್ಳು ಹೇಳಿಲ್ಲ ಅನ್ನುವಂತೆ ಆಗಾಗ ಪುಸ್ತಕ,ಲ್ಯಾಪ್ ಟಾಪ್ ತೆಗಯುತ್ತಾ ಓದುತ್ತಿದ್ದ ಹಾಗೆ ಅವಳಿಗೆ ಕಾಣುವಂತೆ ಇದ್ದು ಅಪ್ಪನ ಸಂಗಡ ತೋಟದ ಕಡೆಗೂ, ಕೆಲಸ ನಿಧಾನಕ್ಕಾದರೂ ಸರಿಯೆ ಕಲಿಯುವ ಪ್ರಯತ್ನ ಮಾಡೋದಂತೂ ಗ್ಯಾರಂಟಿ" ಮಲಗಿದರೂ ನಿದ್ರೆ ಬರೆದಂತೆ ಕಾಡುತ್ತದೆ ಇಂಥ ಬಗೆಹರಿಯದ ಯೋಚನೆಗಳು.
" ಮಂಗಲೆಯ ಕತೆ ಹಿಂಗಾಗಬಾರದಿತ್ತು. ಪಾಪ ಅಷ್ಟು ಒಳ್ಳೆ ಹೆಣ್ಣಿಗೆ
ಇಂತ ದೌರ್ಭಾಗ್ಯ ಬಂದದ್ದು ಯೋಚಿಸೋದಕ್ಕೂ ಕಷ್ಟ ಆಗುತ್ತೆ. ಎಲ್ಲ ವಿಧಿಯಾಟ ಅಂತ ಮುಂದೆ ಹೋಗ್ಬೇಕು ಎಂದು ಜನ ಹೇಳ್ತಾರೆ. ಆದ್ರೆ ವಿಧಿ ಗಿಧಿಯನ್ನೆಲ್ಲ ನಂಬುತ್ತಿದ್ದರೆ ಜಗತ್ತು ಇಷ್ಟು ಓಡ್ತಾ ಇರಲಿಲ್ಲ ಅನ್ನೋದು ಈ ಕಣ್ಣಿಗೆ ಕಾಣುತ್ತೆ. ಏನೇ ಇರಲಿ ಅವಳದ್ದು ಪಾಪದ ಜೀವ ಅಂತೂ ಹೌದು. ಇಲ್ಲದಿದ್ದರೆ ಇಷ್ಟು ಪ್ರಾಯದ ವಯಸ್ಸಲ್ಲಿ ವೈಧವ್ಯ ಬಂತು ಅಂದರೆ ಒಪ್ಪೋದಕ್ಕೆ ಸಾಧ್ಯ ಇಲ್ಲ. ಮತ್ತೆ ಮದುವೆ ಆಗಬಹುದಿತ್ತು. ಆದರೆ ಇದು ಹಳ್ಳಿ . ಬದಲಾವಣೆಯ ಗಾಳಿ ನಗರದಲ್ಲಿ ಬೀಸುವಷ್ಟು ವೇಗವಾಗಿ ಹಳ್ಳಿಯಲ್ಲಿ ಬೀಸುದಿಲ್ಲ. ಏನಾದರಾಗಲಿ ಅವಳನ್ನು ನೆನೆಸಿಕೊಂಡರೆ ಪಾಪ ಅನಿಸುದಂತೂ ಸತ್ಯ. ಯಾರಿಗೆ ತಾನೇ ತನ್ನಿಷ್ಟದ ವಿರುದ್ಧವಾಗಿ ತಾನು ಹುಟ್ಟಿದ ಊರನ್ನು ಬಿಟ್ಟು ಬೇರೆ ಊರಿಗೆ ಹೋಗಬೇಕು ಅನಿಸುತ್ತೆ ಹೇಳಿ. ಅವಳಪ್ಪ ಶಂಭಣ್ಣನನ್ನು ಕಂಡರೆ ನನಗೂ ರೋಷ ಉಕ್ಕುತ್ತೆ. ಅವನ ಸಾರಾಯಿಯ ಅಮಲಿನ ಕೆಂಪು ಕಣ್ಣುಗಳು ಇನ್ನೂ ನೆನಪಿದೆ. ಅವಳೊಂದಿಗೇ ಬರಿದೇ ನಗುತ್ತ ಮಾತಾಡಿದ್ದಕ್ಕೆ, ಒಂದೆರಡು ಸಾರಿ ಗೆಳೆಯರೊಂದಿಗೆ ಸಿನಿಮಾಕ್ಕೆಂದು ಯಲ್ಲಾಪುರಕ್ಕೆ ಬಂದದ್ದನ್ನೇ ನೆಪ ಮಾಡಿಕೊಂಡು ಬಲವಂತದಿಂದ ಮಗಳನ್ನು ಯಾರಿಗೋ ಮದುವೆ ಮಾಡಿಕೊಟ್ಟು ಈಗ ಗಂಡ ಸತ್ತ ವಿಧವೆಯಾಗಿ ತವರಿಗೆ ಬಂದವಳನ್ನು ಸಾಕುವ ಹಣೆಬರಹ ಯಾರಿಂದ ತಪ್ಪಿಸಲಿಕ್ಕಾಯಿತು.? ಹೊತ್ತು ಹೋಗದೇ ಯಾರಾದರೂ ಮಾತಿಗೆ ಸಿಕ್ಕರೆ ಸಾಕು ಅನ್ನುವ ಸ್ಥಿತಿಯಲ್ಲಿ ಗಂಡಸರೊಂದಿಗೆ ಮಾತಿಗಿಳಿದರೆ ಹಾದರದ ಮುಂಡೆ ಎನಿಸಿಕೊಳ್ಳಬೇಕಾದೀತೆಂದು ಪುರುಷರೆದುರಲ್ಲಿ ಆಕೆ ಮೂಕಿಯಾಗಿದ್ದಳೆ.
ಹಾಗೆ ಮರೆಯೋದಕ್ಕೆ ಸಾಧ್ಯವಿದ್ದಿದ್ದರೆ ಈ ಊರಿಗೆ ವಾಪಸ್ಸು ಬರುವ ಕಷ್ಟ ಮೈ ಮೇಲೆ ಎಳೆದುಕೊಳ್ಳುತ್ತಲೇ ಇರಲಿಲ್ಲ. ಅಮ್ಮ ಗೊತ್ತಾದರೆ ನೊಂದುಕೊಳ್ಳುತ್ತಾಳೆ ನಿಜ. ಆದರೆ ಅವಳ ಬದುಕನ್ನ ಇಲ್ಲೇ ಸವೆಸಿದ್ದಾಳೆ. ಇನ್ನು ನನ್ನ ಜೀವನದಲ್ಲಿ ಇಲ್ಲೇ ಬದುಕಬೇಕೆಂದು ಇಚ್ಛೆ ನನ್ನದು ಎಂದು ಪ್ರೀತಿಯಿಂದ ಹೇಳಿದರೆ ಅರ್ಥ ಮಾಡಿಕೊಳ್ಳುತ್ತಾಳೆ. ಅವಳಿಗೆ ಊರವರ ಮಕ್ಕಳೆಲ್ಲ ಹೊರಗಡೆ ದುಡಿಯುತ್ತಿದ್ದ ಹಾಗೇ ತನ್ನ ಮಗನೂ ನೌಕರಿ ಮಾಡಬೇಕೆಂದು ಆಸೆ ಇರಬಹುದು. ಎಷ್ಟು ದಿನ?
ಅವಳಿಗೂ ವಯಸ್ಸಾದರೆ ಬೆಂಗಳೂರಿಗೆ ಮಗನಿರುವಲ್ಲಿಗೆ ಬರುವ ಬಯಕೆಯಾಗುದಿಲ್ಲವೆ. ಬಯಕೆ ಬೇಡ ಬಿಡಿ; ಅನಿವಾರ್ಯ ತಾನೇ.. ಅಪ್ಪ ಗಟ್ಟಿಯಿರುವರೆಗೆ ಇಲ್ಲಿ ಯಾವ ಸಮಸ್ಯೆಯೂ ಆಕೆಗೆ ಸುಳಿಯುದಿಲ್ಲ.ಅದೇ ಇನ್ನೊಂದು ಐದಾರು ವರ್ಷವಾದರೆ ಅಪ್ಪನಿಗೂ ಅರವತ್ತು ದಾಟುತ್ತೆ. ಈಗಲೇ ಅಪ್ಪನ ಮುಖ ನೋಡುವುದಕ್ಕೆ ನೋವಾಗುತ್ತೆ. ಕೆನ್ನೆ ಗಂಟಿಕ್ಕಿದೆ. ಗಡ್ಡದಿಂದ ಹಿಡಿದು ಕೂದಲೆಲ್ಲ ಬೆಳ್ಳಿ ಸರಿಗೆಗಳಂತಾಗಿದೆ. ಹಣೆಯ ನಯ ಹೋಗಿ ಸುಕ್ಕು ಕಾಣಿಸುತ್ತೆ. ಯಾಕೆ ಮಾತಾಡುವುದಿಲ್ಲ ಮಗ ಅಂತ ಅಪ್ಪ ದಃಖ ಪಟ್ಟಿರಬಹುದು. ಆದರೆ ಅವನನ್ನು ನೋಡಿದರೆ ನನಗೆ ಮಾತಾಡುವುದಕ್ಕೂ ದುಗುಡ ಉಂಟಾದ್ದರ ಕಲ್ಪನೆ ಅವನಿಗೆ ಬರಲಿಕ್ಕೆ ಹೇಗೆ ಸಾಧ್ಯ.? ಹೆಗಲ ಮೇಲೆ ಕೂರಿಸಿಕೊಂಡು ಆಟವಾಡಿಸುತ್ತಿದ್ದ ಅವನ ಹೆಗಲು ಈಗ ಬಾಗಿ ಬೆನ್ನು ಬಿದ್ದು ಹೋಗದಂತೆ ಕಾಪಿಡಲು ಜೋತಾಡುತ್ತಿರುವುಂತೆ ಕಾಣುವುದನ್ನು ಈ ಕಣ್ಣಿಂದ ನೋಡಿಯೂ ಚೆನ್ನಾಗಿದ್ದೀಯಾ ಅಪ್ಪಾ ಎಂದು ಮಾತಾಡಿಸುವುದಾದರೂ ಹೇಗೆ ಹೇಳು ?" ಗದ್ಗದಿತನಾಗಿ ಕಣ್ಣಿಂದ ಹನಿ ಜಾರದೆ ಅಂಚಿನಲ್ಲೇ ಕುಳಿತು ಹೆಪ್ಪಾಯಿತು.
ಒಂದೆರಡು ವಾರಗಳು ಅತಿಥಿಯಂತೆ ಕಳೆದುಹೋಯಿತು. ಮುಂದೆ ಏನೆಂಬುದಕ್ಕೆ ಯಾರಿಗೂ ಗೊತ್ತಿಲ್ಲ ಅನ್ನುವ ವಿಚಾರವನ್ನೇ ಅಮ್ಮನಿಗೆ ತಿಳಿಸಿದೆ. ಆರು ತಿಂಗಳಷ್ಟು ಅಂದರೆ ಹಚ್ಚೇ ಸಮಯವಾಗುತ್ತದೆ. ಮಾಣಿ ಮನೆಯ ಕಡೆಯೇ ಇರುತ್ತಾನೆ ಅನ್ನುವ ಸಣ್ಣ ಪ್ರಮಾಣದ ಸಂತಸ ಒಳಗಿಂದ ಇದ್ದರೂ ಸಹ ಕಾನೂರಿನ ಸಮಾಜಕ್ಕೆ ಮಕ್ಕಳು ಹೊರಗಿರುವುದೇ ಶೋಭೆಯೆಂಬ ಅಲಿಖಿತ ಭಾವವಿರುವುದು ಅಮ್ಮನನ್ನು ಕಾಡದಿರಲಿಲ್ಲ. ಊರಲ್ಲೇ ಉಳಿದ ಹುಡುಗರನ್ನು ಹರಾಮ್ ಕೋರರೆಂದು ಜನ ತಿಳಿಯುವುದು ಅವಳಿಗೆ ಹೊಸತಾಗಿರಲಿಲ್ಲ.ಅವರೂ ಅಷ್ಟೇ.. ಕಾನೂರಿನ ಹಿರಿಯ ಜನ ಹೇಳುವ ಸಂಸ್ಕೃತಿಗೆ ತಕ್ಕ ಹಾಗೆ ಬದುಕು ಕಟ್ಟಿಕೊಂಡಿದ್ದರೆ ಅಂತಹ ಭಾವ ಮೊಳೆಯುತ್ತಿರಲಿಲ್ಲದಿರಬಹುದು. ಹೈಸ್ಕೂಲು ಮುಗಿಸಿದ ಹುಡುಗರು ಗುಟ್ಕಾ,ಸಿಗರೇಟು,ಶರಾಬು,ಬೈಕು ಎಂದು ಹಣ ಪೋಲು ಮಾಡುವುದು ಎಲ್ಲೆಲ್ಲೋ ಯಾವ್ಯಾವುದೋ ಕೆಲಸ ಮಾಡುತ್ತೇನೆಂದು ಊರೂರು ಅಲೆಯುವುದನ್ನು ನೋಡಿದ ತಾಯಂದಿರ ಕರುಳು ಕಿತ್ತುಬರದೇ ಇರುತ್ತದೆಯೇ.? ಕಾನೂರಿನ ತಾಯಂದಿರ ಸ್ವಭಾವ ಮಾತ್ರ ಎಷ್ಟು ದ್ವಂದ್ವವಾಗಿ ಕಾಣುವುದೆನ್ನುವುದಕ್ಕೆ ಸಣ್ಣ ಉದಾಹರಣೆಗೆ ,ಗದ್ದೆ, ಬೇಣಗಳನ್ನೆಲ್ಲ ಬೋಳಿಸಿ ಅಡಿಕೆ ಮರ ನೆಟ್ಟು ಲೊಡುಗಟ್ಟಲೆ ಸುಪಾರಿ ಬೆಳೆಯುವ ಅವರಿಗೆ ಅದೇ ಅನ್ನ ನೀಡುವ ತಾಯಿಯಂತೆ ಕಾಣುತ್ತದೆ. ಜಗತ್ತೆಲ್ಲ ಪಾನು,ಗುಟಕಾ ಸೇವಿಸುವುದಕ್ಕೆ ಯಾವ ಅಡ್ಡಿಯೂ ಇಲ್ಲದ ಇವರಿಗೆ ತಮ್ಮ ಮನೆ ಮಕ್ಕಳು ಮಾತ್ರ ತಂಬಾಕಿನ ಕವಳ ಹಾಕಿದರೂ ಸಹಿಸಲಾಗುವುದಿಲ್ಲ.
ಪಾನು, ಗುಟಕಾ ಹಾಕಿ ಹಲ್ಲು ಕೆಂಪಗಾಗಿಸಿಕೊಂಡವನಿಗೆ ಯಾರು ಹೆಣ್ಣು ಕೊಡುತ್ತಾರೆ ಎನ್ನುವುದು ಅವರ ವಿಚಾರ. ಇದ್ದರೂ ಇರಬಹುದು. ಕಾನೂರಿನಲ್ಲಿ ಯಾವಾಗ ಎಂತೆಂತಹ ಮನೋಭಾವ ಬೆಳೆದಿರುತ್ತದೆ ಎಂಬುದಕ್ಕೆ ಯಾವುದೇ ನಿರ್ದಿಷ್ಟತೆ ಇಲ್ಲ. ಬೇರೆಲ್ಲ ಸಮಾಚಾರಕ್ಕಿಂತ ಸಂಸ್ಕೃತಿಯ ವಿಷಯದಲ್ಲಿ ಮಾತ್ರ ಅದು ಪಾರ್ಥೇನಿಯಂನಂತೆ ಹಬ್ಬಿರುತ್ತದೆ. ಪಟ್ಟಣದ ನಾಗರಿಕರು ಎಷ್ಟು ನೀಟಾಗಿ ಸುಂದರ ಸುಸಂಸ್ಕೃತವಾಗಿ ಕಾಣುತ್ತಾರೋ ಅವರ ವ್ಯಸನಗಳೂ ಅಷ್ಟೇ ಸಫೆಸ್ಟಿಕೇಟೆಡ್ ಆಗಿರುತ್ತದೆಯೆಂದು ಇಲ್ಲಿನ ತಾಯಂದಿರಿಗೆ ಕಾಣುವುದಿಲ್ಲ. ಹಳ್ಳಿ ಹಳ್ಳಿಯಾಗೇ ಇರುತ್ತದೆಯೆಂದು ನಗರವಾಸಿಗಳು ಭಾವಿಸಬಹುದು. ಅದು ನಿಜವಲ್ಲ. ಹಳ್ಳಿಯ ಹರಯದ ಹುಡುಗರಿಗೆ ನಗರದ ಕನಸು ಹೆಣ್ಣಿನ ಆಸೆಯಂತೇ ಪುಟಿಯುತ್ತಿರುತ್ತದೆ. ಶಹರದ ಸೌಲಭ್ಯಗಳು ದೊರಕದ ಮಾತ್ರಕ್ಕೆ ಹಳ್ಳಿ ಯಾವಾಗಲೂ ಹೀಗೇ ಇರುತ್ತದೆಯೆಂದು ತಿಳಿಯುವುದು ದಡ್ಡತನ. ಹೊಸ ಹುಡುಗ ಹುಡುಗಿಯರಿಗೆ ಬೆಂಗಳೂರಿನ ಸ್ವಪ್ನ ನಿದ್ದೆಗೆಡಿಸುವುದಕ್ಕೆ ಪರಿಹಾರ ಇಲ್ಲದ ಹಾಗೇ ಹಳ್ಳಿ ಬದಲಾಗುವುದನ್ನು ತಡೆಯುವುದಕ್ಕೂ ಸಾಧ್ಯವಿಲ್ಲ. ಬದಲಾವಣೆ ಬೆಂಗಳೂರಿಗೆ ಮಾತ್ರ ಬೇಕು ಅನ್ನುವುದೂ ಸರಿಯಲ್ಲ. ಮೂಲೆಯ ಹಳ್ಳಿ ಕಾನೂರಿಗೂ ಹೊಸ ಅಂಗಿ ಧರಿಸಬೇಕೆಂಬ ಆಶೆಯಾಗುವುದರಲ್ಲಿ ತಪ್ಪೇನೂ ಇಲ್ಲ.
ಮಡಿ ಮೈಲಿಗೆಯಿಲ್ಲದ ಬೆಂಗಳೂರಿಗೆ ರೋಗ ಬರದೇ ಕಾನೂರಿಗೆ ರೋಗ ತಗುಲುತ್ಯೇ ಅನ್ನುವ ಮಡಿವಂತ ಮುಟ್ಠಾಳರಿಗೆ ತಮ್ಮ ಮಕ್ಕಳು ಬೆಂಗಳೂರಿಂದ ಕಳಿಸುವ ತಿಂಗಳೊಪ್ಪತ್ತಿನ ನೋಟುಗಳು ಹೇಗೆ ಬಂದುವು ಎಂದು ಕೇಳುವ ಧೈರ್ಯವಾಗುವುದಿಲ್ಲ. ಮೈಲಿಗೆ ತಗುಲದೇ ಮಡಿಯ ವ್ಯಾಮೋಹ ಕಳಚಿಕೊಳ್ಳುವುದು ಸಾಧ್ಯವಾಗಿದ್ದರೆ ಇಪ್ಪತ್ತೈದರ ಹರಯದಲ್ಲೇ ವೈಧವ್ಯ ಅಂಟಿಸಿಕೊಂಡ ಮಂಗಲೆಯನ್ನು ನೋಡಿ ಮರುಕ ಹುಟ್ಟುತ್ತೆ. ಅವಳದ್ದು ತಪ್ಪು ಎಂದು ಹೇಳುವುದಿಲ್ಲ. ಆದರೆ ಸರಿಯನ್ನಾದರೂ ಅಪ್ಪಿಕೊಳ್ಳಬಹುದಿತ್ತೇನೋ ಎಂದನಿಸುತ್ತದೆ.
ನಗರಗಳ ಗಾಳಿ ಬೀಸುವವರೆಗೂ ಹಳ್ಳಿಯಲ್ಲಿ ಶತಮಾನಗಳಿಂದ ಲಸಿಕೆ ಸಿಗದೇ ನಾರುತ್ತಿರುವ ರೋಗಗಳು ಹಾಗೇ ಸಾಂಕ್ರಮಿಸುತ್ತಲೇ ಇರುತ್ತದೆ. ಶತಮಾನದಿಂದ ಶತಮಾನಕ್ಕೆ ತಲೆಮಾರಿನಿಂದ ತಲೆಮಾರಿಗೆ...
ಹಳೆಯ ಪಂಚೆಯನ್ನೇ ತೊಳೆದು ತೊಳೆದು ಉಡುವ ಕಾನೂರಿನ ಹಳೆಯ ಜನಕ್ಕೆ ತಮ್ಮೂರ ಮಕ್ಕಳು ಇಂಗ್ಲೀಷಿನ ಪ್ಯಾಂಟು ಧರಿಸುವುದನ್ನು ನೋಡಿ ಹೆಮ್ಮೆಯಾಗುವುದರಲ್ಲಿ ನನಗೇನೂ ವಿರೋಧಾಭಾಸ ಕಾಣಿಸುವುದಿಲ್ಲ. ಊರಲ್ಲೇ ಉಳಿದ ಮಂಗಲೆಯಂತ ಎಷ್ಟೋ ಯುವಕ- ಯುವತಿಯರು ಮಾತ್ರ ಹೊಸ ಪ್ಯಾಂಟೂ ಸಿಗದೆ ಹಳೇ ಪಂಚೆಯೂ ಸಿಗದೆ ಬೆತ್ತಲಾಗುವುದನ್ನು ತಡೆಯಲು ನಮ್ಮ ನಿಮ್ಮಿಂದ ಸಾಧ್ಯವಾಗುವ ಮಾತಾದರೂ ಹೌದೇ..?
- ರತೀಶ ಹೆಬ್ಬಾರ.
ಇರುಳು ನನ್ನದಂತೆ ಸ್ವಪ್ನ ನನ್ನದಂತೆ ಈ ಬಾನ ನೀಲಿ ನನ್ನದಂತೆ ಮೊಗೆದಷ್ಟು ಉಳಿಯುವ ನೀರು ಕುಡಿದಷ್ಟು ಉಸಿರು ನನ್ನದಂತೆ ಉಳಿದದ್ದೆಲ್ಲ ಬಾಡಿಗೆಗೆ ತಂದದ್ದು ಕೇಳುವ ಗೋಜೇ ಬೇಡ.. ಮರೆತೆ, ಈ ಕವಿತೆಯೂ ನನ್ನದಂತೆ..
ಕಣ್ಣಾಯಿಸಿದವರು
Subscribe to:
Post Comments (Atom)
ಸದ್ಯದ ಬರ್ಯಾಣ
DEJA-VU
ಕಾನೂರಿನಲ್ಲಿ ಇಂತಾ ಫಟಿಂಗರ ಸಂಖ್ಯೆ ತುಂಬಾ ಏನಿಲ್ಲ. ವೆಂಕಣ್ಣ ಅಂತ ಮಹಾಫಟಿಂಗರ ಸಾಲಿಗಂತೂ ಸೇರಿಸೋದಕ್ಕೆ ಲಾಯಕ್ಕಿಲ್ಲ. ಅವನ ಕರಾಮತ್ತು ಹೇಳಿಕೊಳ್ಳುವಂತ ಘನಾಂದಾರಿದು ಅ...
ಟಾಪ್ ಓದಾಣ
-
ತೋಚಿದ್ದ ಗೀಚಿದ್ದು ಜಗತ್ತು ಬೇಸರವಾದಾಗೆಲ್ಲ ಎಲ್ಲಾದ್ರೂ ದೂರ ಹೊರಟೋಗ್ಬಿಡಣ ಅನ್ಸತ್ತೆ. ಆದ್ರೆ ಮತ್ತೆ ಅದ್ಯಾವುದೋ ಅಂತರಾತ್ಮ ಒಳಗಿಂದೊಳಗೇ ಉತ್ತೇಜನ ನೀಡ್ತಾನೆ ಇರತ್...
-
"ನಿಂಗೊತ್ತಿದ್ದ ಇವತ್ತೆಂತೋ ಸ್ಪೆಷಲ್ ಇತ್ತು. ಸ್ಟೇಟಸ್ ನೋಡ್ದ್ಯ? ಪಾರ್ವಾಳ ಬಂದಿತ್ ಮನೆ ವಳ್ಗೆಯ " ಗೊತ್ತಾತ್ ಇಂತ ಕೆಲ್ಸ ನಿನೇ ಮಾಡಂವ ಹೇಳ್ ನಂಗೊತ...
-
ದಾಟು ಜಾತಿ ಎಂಬುದು ನಮ್ಮಲ್ಲಿ ಎಂದಿನಿಂದ ರೂಢಿಯಲ್ಲಿತ್ತು ಯಾವಾಗ ಅದು ಸಮಸ್ಯೆಯಾಯಿತು ಎಂಬ ಅರಿವು ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ಅದರ ತಾರ್ಕಿಕ ಅಧ್ಯಯನ ಅಗತ್ಯವ...
No comments:
Post a Comment