ಕಣ್ಣಾಯಿಸಿದವರು

Saturday, 12 September 2020

DEJA-VU

ಕಾನೂರಿನಲ್ಲಿ ಇಂತಾ ಫಟಿಂಗರ ಸಂಖ್ಯೆ ತುಂಬಾ ಏನಿಲ್ಲ‌. ವೆಂಕಣ್ಣ ಅಂತ ಮಹಾಫಟಿಂಗರ ಸಾಲಿಗಂತೂ ಸೇರಿಸೋದಕ್ಕೆ ಲಾಯಕ್ಕಿಲ್ಲ. ಅವನ ಕರಾಮತ್ತು ಹೇಳಿಕೊಳ್ಳುವಂತ ಘನಾಂದಾರಿದು ಅಂತ ನನಗಂತೂ ಅನಿಸುದಿಲ್ಲ. ಆದ್ರೆ ಕತೆಯಾಗ್ಬೇಕು ನೋಡಿ. ವೆಂಕಣ್ಣ ಹಲ್ಕಾ ಬಡ್ಡಿಮಗ ಯಾಕಾದ ಅನ್ನೋದು ಮಾತ್ರ ನಾವು ನೀವು ಕಲ್ಪನೆ ಮಾಡ್ಕಳುವಷ್ಟು ಸಸಾರದ್ದಲ್ಲ. ವೆಂಕಣ್ಣಂಗೆ ಈಗ ಸುಮಾರು ಐವತ್ತೈದರ ಆಸುಪಾಸು ಇರಬಹುದು. ನೋಡ್ಲಿಕ್ಕೆ ಹಾಂಗೆ ಕಾಣುದಿಲ್ಲ ಮತ್ತೆ.. 'ಅವ ಸ್ನಾನ ಮಾಡಿ 'ರಾಪು' ಮಾಡಿಕೊಳ್ಳೋದ ನೋಡ್ಬೇಕು' ಅಂತ ಊರ ಹೆಂಗಸರೆಲ್ಲ ಮಾತಾಡಿಕೊಳ್ತಾರೆ..

ಅಂದಾಜು ಮಾಡಿದ್ರಿ ಅಂತಾಯ್ತು.. ವೆಂಕಣ್ಣ ಭಾಳ ನೀಟಾದ ಮನುಷ್ಯ ಅಂತೂ ಹೌದು. ಸಂಡಾಸಿಗೆ ಅರ್ಧ ಗಂಟೆ ಮೀಯುದಕ್ಕೆ ಮುಕ್ಕಾಲು ಗಂಟೆ ಇಷ್ಟಾದಮೇಲೆ ಕನ್ನಡಿ ಮುಂದೆ ನಿಂತ್ಕೊಂಡು ತಲೆ ಬಾಚಿದಂಗೆ ಸಿಗೋ ಒಂದೊಂದೇ ಬೆಳಿಕೂದಲನ್ನ ಕಿತ್ತು ತೆಗೆದರೂ ಅವನ ತಲೆ ಇನ್ನೂ ಅರ್ಧ ಕಾಲಿ ಆಗದೇ ಇನ್ನರ್ಧ ಉಳಿದುಕೊಂಡಿದೆ ಅನ್ನೋದು ವಾಪಸ್ ಬರೋದಕ್ಕಿರೋ ವಿನಾಯಕನಿಗೆ ಅಪ್ಪನ ಗುರುತು ಸಿಗದಂತಾಗದಿರಲಿ ಎಂದಂತೆ. ಇದನ್ನ ನಾನೇನು ಹೇಳುದಿಲ್ಲ .. ಅವನೇ ಯಾವಾಗಲಾದ್ರೂ ಯಲ್ಲಾಪುರದ ಕಡೆಗೆ ಹೋದರೆ ಹಜಾಮನತ್ರ ಹೋಗಿ ತಲೆಗೆಲ್ಲ ಕಪ್ಪು ಬಣ್ಣ ಹಚ್ಚಿ ಮೂವತ್ತರ ಹುಡುಗನಂತೆ ಮಾಡಿಕೊಂಡು ಬರುವಾಗ ದಾರಿಲಿ ಸಿಕ್ಕಿ ಮದುವೆ ನಿನಗೋ ಅಥವಾ ನಿನ್ನ ಮಗನಿಗೋ ಅಂತ ಕೇಳಿದರೆ "ನನ್ನ ಮಾಣಿ ಬೆಂಗಳೂರಿಗೆ ಹೋಗಿ ನಾಲ್ಕೈದ್ ವರ್ಷಕ್ಕೆ ಬಂತ್ರ.. ವಾಪಸ್ ಬಂದ್ರೆ ಇವನೇ ನನ್ನಪ್ಪ ಅಂತ ಹೇಳುದಕ್ಕೆ ಅವಂಗೆ ಆಯಿ ಇಲ್ಲೆ ನೋಡಿ. ಅದ್ಕೇ ಅವ ಹೋಗಕಿದ್ರೆ ಹೆಂಗಿದ್ನೋ ಹಂಗೇ ಇರವಲ್ದ..?" ಎಂದು ಕೇಳ್ತಾನೆ ಪುಣ್ಯಾತ್ಮ. ಹೋಗಲಿ ಪಾಪ! ಹೆಂಡತಿ ಗಿರಿಜೆ ಬಾಳ ಬೇಗ ಇವನನ್ನ ಬಿಟ್ಟು ಹೋದಳು. ಮಾಣಿ ವಿನಾಯಕ ಇನ್ನೂ ಸಣ್ಣವ ಇದ್ದ. ಮೂರೋ ನಾಲಕ್ಕೋ ವರ್ಷದವನಾಗಿದ್ದ ಅಷ್ಟೇ. ಮತ್ತೆ ಮದುವೇ ಆಗೋದಕ್ಕೂ ವೆಂಕಣ್ಣ ತಯಾರಾಗಲಿಲ್ಲ ಅನ್ನೋದು ಈಗ ಅವನಿಗೆ ಹೆಮ್ಮೆ ಅನಿಸಿದರೂ ಅವನಂತ ಅಂಡಪಿರ್ಕಿಗೆ ಒಂದು ಹೆಣ್ಣು ಕೊಟ್ಟಿದ್ದೇ ಹೆಚ್ಚು, ಎರಡನೇ ಮದ್ವೆಗೆ ಹೆಣ್ಣು ಕೊಡೋ ತಂದೆ ಈ ಭೂಮಿ ಮ್ಯಾಲೆ ಇಲ್ಲೆ ಎಂದು ಇಪ್ಪತ್ತು ವರ್ಷದ ಹಿಂದೇ ಅಕ್ಕಪಕ್ಕದವರು ಆಡಿಕೊಳ್ತಿದ್ದರು. ಗಿರಿಜೆ ಸತ್ತದ್ದು ಮಾತ್ರ ಪಾಪ ಅದೇನಾಗಿತ್ತೋ ಕೊನೆಗೂ ಗೊತ್ತಾಗಲಿಲ್ಲ. ಒಂದು ತಿಂಗಳಿಂದ ಹೊಟ್ಟೆನೋವು ಅಂತಿದ್ದಳಂತೆ. ವೆಂಕಣ್ಣ ಹೇಳಿದ್ದೇ ಕರೆ. "ಆಸ್ಪತ್ರೆಗಾದ್ರೂ ತಗಂಡೋಗ್ರೋ.. ನಾ ಈ ಮನೆಲಿ ಸಾಯ್ತ್ನಿಲ್ಲೆ. ಪ್ರಧಾನಬಾಗಿಲ ಹೊರ್ಗಾದ್ರೂ ಮನಗಿಸ್ರೋ " ಗೋಳೋ ಅಂತ ಕೋಣೆ ಒಳಗಿಂದ ಕೂಗೋದು ಅಂಗಳದಿಂದ ಓಡಾಡುವಾಗ ಕೇಳ್ತ್ತಿತ್ತು ಎಂದು ಆಳುಕಾಳುಗಳು ಹೇಳುತ್ತಿದ್ದರು. ಹೊಟ್ಟೆನೋವು ಎಂದು ಕಷಾಯ ಕುಡಿತಿದ್ದೆ ಅಂದಿದ್ದಳಂತೆ. ಜಾಸ್ತಿ ದಿನ ಉಳಿಯಲಿಲ್ಲ. 'ಅದೇನು ಗೆಡ್ಡೆ ಬೆಳೆದಿತ್ತೋ ಏನೋ ಆಪರೇಷನ್ ಆದ್ರೂ ಮಾಡಿದ್ರೆ ಬದುಕ್ತಿತ್ತೇನೋ ಪಾಪ ಗಿರಿಜಮ್ಮನೋರು' ಅಂದು ತಿಮ್ಮು ಆಗಾಗ ವೆಂಕಣ್ಣನನ್ನು ಕಂಡಾಗೆಲ್ಲ ಗಿರಿಜೆಯನ್ನು ನೆನೆದು ಬಣಬಣಿಸುತ್ತಾಳೆ.

ಗಿರಿಜೆ ಸಾಯೋದಕ್ಕೆ ಎರಡು ದಿನ ಮೊದಲು ವೆಂಕಣ್ಣ ಅಡಿಕೆ ಕೊಟ್ಟು ಬರುತ್ತೇನೆಂದು ಮನೆಯಲ್ಲಿ ಅದೇ ಕೆಲಸದಾಳು ಪಾಯ್ಕು ಇದ್ದಾನಲ್ಲ ಅವನ ಹೆಂಡ್ತಿ ತಿಮ್ಮು ಇದ್ದಾಳಲ್ಲ. ಅವಳತ್ರ ಮನೆಕಡೆಗೆಲ್ಲ ನೋಡ್ಕ ಅಂತ ಹೇಳಿ ಯಲ್ಲಾಪುರಕ್ಕೆ ವಕಾರಿಗೆ ಹೋದವ ಸಂಜೆಯಾದರೂ ಬರಲೇ ಇಲ್ಲ. ಖಾನವಳಿಯಲ್ಲಿ ಉಳಿದಿದ್ದ ಅನ್ನುವ ವಿಚಾರ ಆಮೇಲೆ ವಿನಾಯಕನಿಂದ ಗೊತ್ತಾದರೂ ಅವನು ಬರದೇ ಗಿರಿಜೆಗೆ ಅನ್ನ ಬೇಯಿಸಿ ಹಾಕುವವರಾದ್ರೂ ಯಾರು ಹೇಳಿ.‌?
ತಿಮ್ಮು ಸಂಜೆಯ ಹೊತ್ತಿಗೆ ಕೊಟ್ಟಿಗೆಲಿದ್ದ ಒಂದು ಬರಡು ದನಕ್ಕೆ ಹುಲ್ಲು ಕಲಗಚ್ಚು ಕುಡಿಸಿ 'ಮನೆಗೆ ಹೋವ್ತೆ ಬಡ್ತೇರೆ ನೋಡ್ಕಳಿ ಮತ್ತೆ.. ಜೋಪಾನ' ಎಂದು ಹೇಳಿ ಹೋದವಳು ಪಾಯ್ಕು ಮನೆಗೆ ಬರಲಿಲ್ಲ ಅಂತ ಒಬ್ಬನೇ ತನ್ನ ಕೂಸೊಂದಿಗೆ ಹಟ್ಟಿಯಲ್ಲಿ ಮಲಗಲು ಹೆದರಿಕೆಯಾಗಿ ಅವಳನ್ನೂ ಹೊತ್ತುಕೊಂಡು ರಾತ್ರೆ ಎಂಟರ ಹೊತ್ತಿಗೆ ವಾಪಸ್ಸು ವೆಂಕಣ್ಣನ ಮನೆಗೇ ಬಂದಳಂತೆ. ಇಷ್ಟು ಹೊತ್ತಾದರೂ ಮನೆಯಲ್ಲಿ ಬೆಳಕು ಹಚ್ಚಿಲ್ಲ, ಬಾಗಿಲು ದೀಪ ಹೊತ್ತಿಸಿಲ್ಲದ್ದರಿಂದ ಕಾನೂರಿಗೆ ಬರುವ ಕೊನೆಯ ಗಾಡಿಗೂ ವೆಂಕಣ್ಣಯ್ನೋರು ಬಂದಿಲ್ಲ ಎಂಬುದು ಅವಳಿಗೆ ಖಾತರಿಯಾಗಿ ತಾನು ಬಂದದ್ದು ಭಾಳ ಒಳ್ಳೆದಾಯಿತೆಂದು ಹೊರ ಜಗುಲಿಯಿಂದಲೇ ಕೂಗಿ ಕರೆದಳು,
"ಗಿರಿಜಮ್ಮೋರೆ, ಹೋಯ್..."
ಗಿರಿಜೆ ಇನ್ನು ಎದ್ದು ಬರುವಷ್ಟಿರಲಿಲ್ಲ. ಕೋಣೆಯೊಳಗಿಂದ ಮಲಗಿದ್ದ ಮಂಚದಿಂದಲೇ ಆದಷ್ಟು ಧ್ವನಿಯೆತ್ತರಿಸಿ "ಅವರು ಇನ್ನೂ ಬೈಂದ್ವಿಲ್ಲೇ ಅಂತ ಕಾಣ್ತು ತಿಮ್ಮು, ನೀನೇ ಒಂದು ಲೋಟ ಗಂಜಿನಾದ್ರೂ ಬೇಯ್ಸಾಕ್ತ್ಯ ಮಾತ್ರ.. ನೀ ಊಟ ಮಾಡ್ಕ ಬಂದ್ಯ ಇಲ್ಯ..?" ಎನ್ನುತ್ತಲೇ ತಕ್ಷಣ ಏದುಸಿರಿನಿಂದ ಬರುವುದರಲ್ಲಿದ್ದ ಕೆಮ್ಮನ್ನು ತಡೆಹಿಡಿದುಕೊಂಡಳು.
ತಿಮ್ಮು ಗಿರಿಜಮ್ಮನವರ ಧ್ವನಿ ಕೇಳಿಯೆ ಅವರ ಪರಿಸ್ಥಿತಿ ಅಂದಾಜಿಸಿದವಳು ಆದರೂ ಕೊಂಚ ಹಿಂಜರಿಕೆ ಮತ್ತು ಅನುಮಾನದಿಂದ ಕೇಳಿದಳು " ಅಮ್ಮನೋರೆ ಏನು ಹೇಳ್ತಾ ಇದ್ದೀರ ನೀವು? ನಾನು ಗಂಜಿ ಮಾಡಿಹಾಕಿದ್ರೆ ನೀವು ಮುಟ್ತೀರ? ಬ್ಯಾಡ ಬ್ಯಾಡ ಶಾರದಕ್ಕನ ಮನೆಗೆ ಹೋಗಿ ಅವ್ವಾವ್ರನ್ನ ಇಲ್ಲ ಸಾವಿತ್ರಕ್ಕ‌ನ ಕರ್ಕಂಡು ಬರ್ತೀನಿ ಇರಿ.." ಅನ್ನುವಾಗಲೇ ಗಿರಿಜೆ ಮತ್ತಷ್ಟು ಕೆಮ್ಮುತ್ತಾ ಹೆಣಗಾಡುತ್ತ ಎದ್ದು ಜಗುಲಿಯ ಬಳಿ ಬಂದು ಲೈಟು ಹಚ್ಚಿ ಗೋಡಗೊರಗಿ ಕುಸಿದು ಬಿದ್ದಳು. ಅದನ್ನು ಕಂಡದ್ದೇ ತಡ ತಿಮ್ಮು ಹಿಂದೆ ಮುಂದೆ ನೋಡದೆ ಒಳಗೆ ನುಗ್ಗಿ ಅವರನ್ನು ಕೈಗಳಿಂದ ಹಿಡಿದು ಹಣೆ ತಟ್ಟಿ ನಿಧಾನಕ್ಕೆ ಎಚ್ಚರ ತಪ್ಪದಂತೆ ಮಾತಾಡಿಸುತ್ತ ಮರಳಿ ಮಂಚವಿರುವ ಕೋಣೆಗೆ ಕರೆದುಕೊಂಡು ಹೋಗಿ ಮಲಗಿಸಿದಳು‌. ಸುಧಾರಿಸಿಕೊಳ್ಳುತ್ತಿದ್ದ ಗಿರಿಜೆ ' ಆಗ್ತ್ಲೆ ತಿಮ್ಮು ಇನ್ನಾಗ್ತ್ಲೆ ನನ್ನತ್ರ. ನೀ ಗಂಜಿ ಬೇಯಿಸಿ ಕೊಟ್ರೆ ನೆಮ್ಮದಿಯಿಂದ ನಿದ್ರೆ ಮಾಡ್ತೆ. ನಾಳಿನ ಬೆಳಕು ಕಾಣು ಯೋಗ ಇದ್ರೆ ಇರ್ತೆ. ಇಲ್ಲದ್ರೆ ಅಷ್ಟೇ.." ಅನ್ನುವುದರಲ್ಲೇ ತಿಮ್ಮು ಗಡಿಬಿಡಿಯಿಂದ ಮತ್ತೇನನ್ನೂ ಯೋಚಿಸದೇ ಅಡಿಗೆ ಮನೆಗೆ ಹೋಗಿ ಒಂದು ಲೋಟ ಅಕ್ಕಿ ತೊಳೆದು ನೀರು ಹಾಕಿ ಒಲೆಗೆ ಸೌದೆ ಒಟ್ಟುತ್ತ ಬೆಂಕಿ ಹೊತ್ತಿಸಿ ಗಂಜಿಗೆ ಇಟ್ಟಳು. ಬೆಂಕಿ ಎಂದಿಗಿಂಲೂ ತುಸು ಜೋರಾಗೇ ಉರಿದಂತಿತ್ತು. ಬೆಳಕು ಅಡಿಗೆ ಕೋಣೆಯಿಂದ ಗಿರಿಜೆ ಮಲಗಿದ್ದ ಕೋಣೆಯೊಳಗೆ ಸರಾಗವಾಗಿ ಹರಿಯುತಿತ್ತು. ಅದೇ ಮಂಚದಲ್ಲಿ ತಿಮ್ಮುವೂ ಗಿರಿಜೆಯ ಕಾಲೊತ್ತುತ್ತ ಕೂತಳು‌. ನಾಲ್ಕು ವರ್ಷದ ಮಗು ಮಂಗಲೆ ಒಲೆಯ ಸೌದೆ ಸರಿಸುತ್ತ,ಕಿಡಿಯೆಬ್ಬಿಸುತ್ತ ಬೆಂಕಿ ಬಿಸಿ ತೆಗೆದುಕೊಳ್ಳುತ್ತಿದ್ದಳು.

ತಿಮ್ಮು ಅಂದು ನಡೆದದ್ದನ್ನ ಯಾರೊಂದಿಗೂ ಹೇಳದೆ ಒಳಗೇ ಬಚ್ಚಿಟ್ಟುಕೊಂಡಿದ್ದಳು. ಎಲ್ಲಾದರೂ ತಾನು ಗಂಜಿ ಬೇಯಿಸಿಕೊಟ್ಟದ್ದು ಗೊತ್ತಾದರೆ ಏನು ಮಾಡಿಯಾರೋ ಎಂದು ಭಯದಲ್ಲೇ ಆಕೆ ದಿನದೂಡಿದ್ದಳು. ಮತ್ತೊಂದೇ ದಿನ ಅಷ್ಟೇ ಗಿರಿಜೆ ಬದುಕುಳಿದದ್ದು‌. ಅದರೊಳಗೆ ವೆಂಕಣ್ಣ ಎಮ್ಮೆಮೇಲೆ ವಿನಾಯಕನನ್ನು ಕೂರಿಸಿಕೊಂಡು ಮಧ್ಯಾನ್ನದ ಹೊತ್ತಿಗೆ ಮನೆಕಡೆ ಬಂದುಮುಟ್ಟಿದ್ದ.
ಈಗ ಮಂಗಲೆಗೆ ಮಾತ್ರ ಮೂರ್ನಾಲ್ಕು ದಿನಕ್ಕೊಮ್ಮೆ ವೆಂಕಣ್ಣ ನೆಲ ಒರೆಸುವುದಕ್ಕೆಂದು ಕೋಣೆಯಿಂದ ಸನ್ನೆ ಮಾಡುವಾಗ ಅಸ್ಪಷ್ಟವಾಗಿ ತಾನು ಮನೆಯ ಒಳಾಂಗಣದ ಆವರಣವನ್ನೆಲ್ಲ ಮೊದಲೇ ನೋಡಿದಂತೆಯೂ ಅನಿಸಿ ಮಂಚದ ಮೇಲೂ ಕೆಳಗೂ ಎಲ್ಲ ನೀಟಾಗಿ ಒರೆಸಿ ಎದ್ದುಬರುವಾಗ ಕಾಯಲೆಯಿಂದ ಮಲಗಿರುವ ಗಿರಿಜಮ್ಮನವರ ಚಿತ್ರವಷ್ಟೇ ಕಣ್ಮುಂದೆ ಬರುತ್ತಿದ್ದವು.

--RATEESH HEBBAR

Tuesday, 8 September 2020

ಊರು ಊರಾಗೇ ಇರಬಹುದೇ?

ಕೆಲಸ ಬಿಟ್ಟಿದ್ದೇನೆ ಅಂದರೆ ಅಮ್ಮ ಖಂಡಿತ ನೊಂದುಕೊಳ್ಳುತ್ತಾಳೆ. ಇಷ್ಟು ಕಷ್ಟ ಪಟ್ಟು ಓದಿಸಿ ಒಂದು ಹಂತಕ್ಕೆ ಬರುತ್ತಿದ್ದಾನೆ ಮಗ ಎಂದು ಆಸೆಗಣ್ಣಿನಿಂದ ಕಾಯುತ್ತಿರುವ ಅಪ್ಪ ಅಮ್ಮನಿಗೆ ಆಘಾತ ಕೊಡುವುದಂತೂ ಸುತಾರಾಂ ಸಾಧ್ಯವಿಲ್ಲದ ಮಾತು. ನಾಳೆಯೇ ಮತ್ತೆ ಬೆಂಗಳೂರಿನ ಬಸ್ಸು ಹಿಡಿಯುವುದೇ ಸರಿ. ಇನ್ನೆಷ್ಟು ದಿನ ಎಂದು ಇಲ್ಲಿಯೇ ಬಿದ್ದಿರಲು ಸಾಧ್ಯ. ಒಂದಲ್ಲ ಒಂದು ದಿನ ಗೊತ್ತಾಗಲೇ ಬೇಕು‌. ಮಗ ಹೇಳದೇ ತಮ್ಮಿಂದ ಬಚ್ಚಿಟ್ಟಿದ್ದಾನೆ ಎಂಬ ಸತ್ಯ ಗೊತ್ತಾದರೆ ಮತ್ತೂ ನೊಂದುಕೊಳ್ಳೊದಿಲ್ಲವಾ. ಅಪ್ಪನನ್ನು ಹೇಗಾದರೂ ಒಲಿಸಬಹುದು ಆದರೆ ಅಮ್ಮ ..! ಮಗ ಬೆಂಗಳೂರು ಬಿಟ್ಟು ಊರಲ್ಲೇ ತೋಟದ ಕೆಲಸ ಮಾಡುತ್ತಾನೆ ಎಂದರೆ ಆಕೆಯ ಹೃದಯ ತಡೆದುಕೊಳ್ಳುತ್ತದೆಯೇ? ಕಾನೂರಿನ ಯಾವ ಗಂಡು ಹುಡುಗರೂ ಪ್ಯಾಟೆಗೆ ಹೋದವರು ಹಿಂದಿರುಗಿ ಬಂದದ್ದಿಲ್ಲ. ನಾನೊಬ್ಬ ಹೀಗೆ ಬೆಂಗಳೂರು ನನ್ನಿಂದ ಸಾಧ್ಯವಿಲ್ಲ ಎಂದುಕೊಂಡು ಬಂದರೆ ತನ್ನ ಮಗ ಊರಿನಿಂದ ಓಡಿ ಪರಾರಿಯಾದ ಎಷ್ಟೋ ಪುಕ್ಕಲು ಗಂಡಸರಿಗಿಂತ ಅಸಮರ್ಥನಾದನಲ್ಲ ಎಂಬ ನೋವು ಆಕೆಗೆ ಕಾಡದಿರುತ್ತದೆಯೇ. ಅದೇನೋ ಒಂದೆರಡು ತಿಂಗಳಿಗೆ ಅಭ್ಯಾಸವಾಗಬಹುದು. ಆದರೆ ನಾನು ಈ ಹಳ್ಳಿಯ ತೋಟದ ಕೆಲಸಗಳಿಗೆ ಲಾಯಕ್ಕಾದ ಕಸುಬಿಯಂತೂ ಅಲ್ಲ. ಕಲಿಯುತ್ತೇನೆ ಅಂದರೂ ಇಪ್ಪತ್ತೈದರ ಹರೆಯದಲ್ಲಿ ಬೆನ್ನು ಬಗ್ಗುವುದು ಸಾಧ್ಯವಾ. ಒಂದು ಅಡಿಕೆಯನ್ನೂ ಹೆಕ್ಕಿದ ಅಭ್ಯಾಸವಿಲ್ಲ. ಇಂದಾದರೂ ಮಂಗಲೆಯನ್ನು ಮಾತಾಡಿಸುವುದಕ್ಕಾಗಿ ಮೆಟ್ಟಗತ್ತಿ ಮೇಲೆ ಕೂತಿದ್ದು. ಎರಡು ತಾಸು ಕೂತವನಿಗೆ ಬೆನ್ನೆಲುಬಿಗೆ ಕಸು ಹಿಡಿದಂತಾಗಿ ವಾಪಸ್ಸು ಬಂದು ಮಲಗಲಿಲ್ಲವೆ. ಎರಡು ತಾಸಾದರೂ ಸುಲಿದದ್ದು ಮಾತ್ರ ಐವತ್ತೋ ನೂರೋ ಚಾಲಿ ಇರಬಹುದಷ್ಟೇ. ಈ ಪಾಮರನಿಂದ ಕೃಷಿ ಕೆಲಸ ಸಾಧ್ಯವಿಲ್ಲದೇನು ಅನ್ನುವ ಉಮೇದಿಯಲ್ಲಿ ಬೆಂಗಳೂರು ಬಿಟ್ಟು ಬಂದದ್ದಾಯಿತು. ಎಷ್ಟು ದಿವಸ ಈ ಹಳ್ಳಿಯ ಋಣ ನನ್ನ ಮೇಲೆ ಇರುತ್ತದೆಯೋ ನೋಡುವ. ಅಲ್ಲಿಯವರೆಗೆ ಏನಾದರೂ ನೆಪ ಹೇಳಿ ಅಮ್ಮನಿಗೆ ಅನುಮಾನ ಬರದಂತೆ ಇಲ್ಲೇ ಇರುವಂತೆ ನೋಡಿಕೊಳ್ಳಬೇಕಾದದ್ದು ಕಷ್ಟದ ಕೆಲಸ. ಹಾಂ..! ಈ ಲಾಕ್ ಡೌನ್, ಕೊರೋನಾ ಮತ್ತೇನೇನೋ ಹೇಳಿ ಒಂದಾರು ತಿಂಗಳು ಕಂಪನಿಯೆಲ್ಲ ಮುಚ್ಚಿವೆಯೆಂದು ದಿನ ತಳ್ಳುವುದಕ್ಕೆ ಲಾಯಕ್ಕಾಯಿತು. ಮಗ ಸುಳ್ಳು ಹೇಳಿಲ್ಲ ಅನ್ನುವಂತೆ ಆಗಾಗ ಪುಸ್ತಕ,ಲ್ಯಾಪ್ ಟಾಪ್ ತೆಗಯುತ್ತಾ ಓದುತ್ತಿದ್ದ ಹಾಗೆ ಅವಳಿಗೆ ಕಾಣುವಂತೆ ಇದ್ದು ಅಪ್ಪನ ಸಂಗಡ ತೋಟದ ಕಡೆಗೂ, ಕೆಲಸ ನಿಧಾನಕ್ಕಾದರೂ ಸರಿಯೆ ಕಲಿಯುವ ಪ್ರಯತ್ನ ಮಾಡೋದಂತೂ ಗ್ಯಾರಂಟಿ" ಮಲಗಿದರೂ ನಿದ್ರೆ ಬರೆದಂತೆ ಕಾಡುತ್ತದೆ ಇಂಥ ಬಗೆಹರಿಯದ ಯೋಚನೆಗಳು.

" ಮಂಗಲೆಯ ಕತೆ ಹಿಂಗಾಗಬಾರದಿತ್ತು. ಪಾಪ ಅಷ್ಟು ಒಳ್ಳೆ ಹೆಣ್ಣಿಗೆ
ಇಂತ ದೌರ್ಭಾಗ್ಯ ಬಂದದ್ದು ಯೋಚಿಸೋದಕ್ಕೂ ಕಷ್ಟ ಆಗುತ್ತೆ. ಎಲ್ಲ ವಿಧಿಯಾಟ ಅಂತ ಮುಂದೆ ಹೋಗ್ಬೇಕು ಎಂದು ಜನ ಹೇಳ್ತಾರೆ. ಆದ್ರೆ ವಿಧಿ ಗಿಧಿಯನ್ನೆಲ್ಲ ನಂಬುತ್ತಿದ್ದರೆ ಜಗತ್ತು ಇಷ್ಟು ಓಡ್ತಾ ಇರಲಿಲ್ಲ ಅನ್ನೋದು ಈ ಕಣ್ಣಿಗೆ ಕಾಣುತ್ತೆ. ಏನೇ ಇರಲಿ ಅವಳದ್ದು ಪಾಪದ ಜೀವ ಅಂತೂ ಹೌದು. ಇಲ್ಲದಿದ್ದರೆ ಇಷ್ಟು ಪ್ರಾಯದ ವಯಸ್ಸಲ್ಲಿ ವೈಧವ್ಯ ಬಂತು ಅಂದರೆ ಒಪ್ಪೋದಕ್ಕೆ ಸಾಧ್ಯ ಇಲ್ಲ. ಮತ್ತೆ ಮದುವೆ ಆಗಬಹುದಿತ್ತು. ಆದರೆ ಇದು ಹಳ್ಳಿ . ಬದಲಾವಣೆಯ ಗಾಳಿ ನಗರದಲ್ಲಿ ಬೀಸುವಷ್ಟು ವೇಗವಾಗಿ ಹಳ್ಳಿಯಲ್ಲಿ ಬೀಸುದಿಲ್ಲ. ಏನಾದರಾಗಲಿ ಅವಳನ್ನು ನೆನೆಸಿಕೊಂಡರೆ ಪಾಪ ಅನಿಸುದಂತೂ ಸತ್ಯ. ಯಾರಿಗೆ ತಾನೇ ತನ್ನಿಷ್ಟದ ವಿರುದ್ಧವಾಗಿ ತಾನು ಹುಟ್ಟಿದ ಊರನ್ನು ಬಿಟ್ಟು ಬೇರೆ ಊರಿಗೆ ಹೋಗಬೇಕು ಅನಿಸುತ್ತೆ ಹೇಳಿ. ಅವಳಪ್ಪ ಶಂಭಣ್ಣನನ್ನು ಕಂಡರೆ ನನಗೂ ರೋಷ ಉಕ್ಕುತ್ತೆ. ಅವನ ಸಾರಾಯಿಯ ಅಮಲಿನ ಕೆಂಪು ಕಣ್ಣುಗಳು ಇನ್ನೂ ನೆನಪಿದೆ. ಅವಳೊಂದಿಗೇ ಬರಿದೇ ನಗುತ್ತ ಮಾತಾಡಿದ್ದಕ್ಕೆ, ಒಂದೆರಡು ಸಾರಿ ಗೆಳೆಯರೊಂದಿಗೆ ಸಿನಿಮಾಕ್ಕೆಂದು ಯಲ್ಲಾಪುರಕ್ಕೆ ಬಂದದ್ದನ್ನೇ ನೆಪ ಮಾಡಿಕೊಂಡು ಬಲವಂತದಿಂದ ಮಗಳನ್ನು ಯಾರಿಗೋ ಮದುವೆ ಮಾಡಿಕೊಟ್ಟು ಈಗ ಗಂಡ ಸತ್ತ ವಿಧವೆಯಾಗಿ ತವರಿಗೆ ಬಂದವಳನ್ನು ಸಾಕುವ ಹಣೆಬರಹ ಯಾರಿಂದ ತಪ್ಪಿಸಲಿಕ್ಕಾಯಿತು.? ಹೊತ್ತು ಹೋಗದೇ ಯಾರಾದರೂ ಮಾತಿಗೆ ಸಿಕ್ಕರೆ ಸಾಕು ಅನ್ನುವ ಸ್ಥಿತಿಯಲ್ಲಿ ಗಂಡಸರೊಂದಿಗೆ ಮಾತಿಗಿಳಿದರೆ ಹಾದರದ ಮುಂಡೆ ಎನಿಸಿಕೊಳ್ಳಬೇಕಾದೀತೆಂದು ಪುರುಷರೆದುರಲ್ಲಿ ಆಕೆ ಮೂಕಿಯಾಗಿದ್ದಳೆ.
ಹಾಗೆ ಮರೆಯೋದಕ್ಕೆ ಸಾಧ್ಯವಿದ್ದಿದ್ದರೆ ಈ ಊರಿಗೆ ವಾಪಸ್ಸು ಬರುವ ಕಷ್ಟ ಮೈ ಮೇಲೆ ಎಳೆದುಕೊಳ್ಳುತ್ತಲೇ ಇರಲಿಲ್ಲ. ಅಮ್ಮ ಗೊತ್ತಾದರೆ ನೊಂದುಕೊಳ್ಳುತ್ತಾಳೆ ನಿಜ. ಆದರೆ ಅವಳ ಬದುಕನ್ನ ಇಲ್ಲೇ ಸವೆಸಿದ್ದಾಳೆ. ಇನ್ನು ನನ್ನ ಜೀವನದಲ್ಲಿ ಇಲ್ಲೇ ಬದುಕಬೇಕೆಂದು ಇಚ್ಛೆ ನನ್ನದು ಎಂದು ಪ್ರೀತಿಯಿಂದ ಹೇಳಿದರೆ ಅರ್ಥ ಮಾಡಿಕೊಳ್ಳುತ್ತಾಳೆ. ಅವಳಿಗೆ ಊರವರ ಮಕ್ಕಳೆಲ್ಲ ಹೊರಗಡೆ ದುಡಿಯುತ್ತಿದ್ದ ಹಾಗೇ ತನ್ನ ಮಗನೂ ನೌಕರಿ ಮಾಡಬೇಕೆಂದು ಆಸೆ ಇರಬಹುದು. ಎಷ್ಟು ದಿನ?
ಅವಳಿಗೂ ವಯಸ್ಸಾದರೆ ಬೆಂಗಳೂರಿಗೆ ಮಗನಿರುವಲ್ಲಿಗೆ ಬರುವ ಬಯಕೆಯಾಗುದಿಲ್ಲವೆ. ಬಯಕೆ ಬೇಡ ಬಿಡಿ; ಅನಿವಾರ್ಯ ತಾನೇ.. ಅಪ್ಪ ಗಟ್ಟಿಯಿರುವರೆಗೆ ಇಲ್ಲಿ ಯಾವ ಸಮಸ್ಯೆಯೂ ಆಕೆಗೆ ಸುಳಿಯುದಿಲ್ಲ.ಅದೇ ಇನ್ನೊಂದು ಐದಾರು ವರ್ಷವಾದರೆ ಅಪ್ಪನಿಗೂ ಅರವತ್ತು ದಾಟುತ್ತೆ. ಈಗಲೇ ಅಪ್ಪನ ಮುಖ ನೋಡುವುದಕ್ಕೆ ನೋವಾಗುತ್ತೆ. ಕೆನ್ನೆ ಗಂಟಿಕ್ಕಿದೆ‌. ಗಡ್ಡದಿಂದ ಹಿಡಿದು ಕೂದಲೆಲ್ಲ ಬೆಳ್ಳಿ ಸರಿಗೆಗಳಂತಾಗಿದೆ. ಹಣೆಯ ನಯ ಹೋಗಿ ಸುಕ್ಕು ಕಾಣಿಸುತ್ತೆ. ಯಾಕೆ ಮಾತಾಡುವುದಿಲ್ಲ ಮಗ ಅಂತ ಅಪ್ಪ ದಃಖ ಪಟ್ಟಿರಬಹುದು. ಆದರೆ ಅವನನ್ನು ನೋಡಿದರೆ ನನಗೆ ಮಾತಾಡುವುದಕ್ಕೂ ದುಗುಡ ಉಂಟಾದ್ದರ ಕಲ್ಪನೆ ಅವನಿಗೆ ಬರಲಿಕ್ಕೆ ಹೇಗೆ ಸಾಧ್ಯ.? ಹೆಗಲ ಮೇಲೆ ಕೂರಿಸಿಕೊಂಡು ಆಟವಾಡಿಸುತ್ತಿದ್ದ ಅವನ ಹೆಗಲು ಈಗ ಬಾಗಿ ಬೆನ್ನು ಬಿದ್ದು ಹೋಗದಂತೆ ಕಾಪಿಡಲು ಜೋತಾಡುತ್ತಿರುವುಂತೆ ಕಾಣುವುದನ್ನು ಈ ಕಣ್ಣಿಂದ ನೋಡಿಯೂ ಚೆನ್ನಾಗಿದ್ದೀಯಾ ಅಪ್ಪಾ ಎಂದು ಮಾತಾಡಿಸುವುದಾದರೂ ಹೇಗೆ ಹೇಳು ?" ಗದ್ಗದಿತನಾಗಿ ಕಣ್ಣಿಂದ ಹನಿ ಜಾರದೆ ಅಂಚಿನಲ್ಲೇ ಕುಳಿತು ಹೆಪ್ಪಾಯಿತು.

ಒಂದೆರಡು ವಾರಗಳು ಅತಿಥಿಯಂತೆ ಕಳೆದುಹೋಯಿತು. ಮುಂದೆ ಏನೆಂಬುದಕ್ಕೆ ಯಾರಿಗೂ ಗೊತ್ತಿಲ್ಲ ಅನ್ನುವ ವಿಚಾರವನ್ನೇ ಅಮ್ಮನಿಗೆ ತಿಳಿಸಿದೆ. ಆರು ತಿಂಗಳಷ್ಟು ಅಂದರೆ ಹಚ್ಚೇ ಸಮಯವಾಗುತ್ತದೆ. ಮಾಣಿ ಮನೆಯ ಕಡೆಯೇ ಇರುತ್ತಾನೆ ಅನ್ನುವ ಸಣ್ಣ ಪ್ರಮಾಣದ ಸಂತಸ ಒಳಗಿಂದ ಇದ್ದರೂ ಸಹ ಕಾನೂರಿನ ಸಮಾಜಕ್ಕೆ ಮಕ್ಕಳು ಹೊರಗಿರುವುದೇ ಶೋಭೆಯೆಂಬ ಅಲಿಖಿತ ಭಾವವಿರುವುದು ಅಮ್ಮನನ್ನು ಕಾಡದಿರಲಿಲ್ಲ. ಊರಲ್ಲೇ ಉಳಿದ ಹುಡುಗರನ್ನು ಹರಾಮ್ ಕೋರರೆಂದು ಜನ ತಿಳಿಯುವುದು ಅವಳಿಗೆ ಹೊಸತಾಗಿರಲಿಲ್ಲ.ಅವರೂ ಅಷ್ಟೇ.. ಕಾನೂರಿನ ಹಿರಿಯ ಜನ ಹೇಳುವ ಸಂಸ್ಕೃತಿಗೆ ತಕ್ಕ ಹಾಗೆ ಬದುಕು ಕಟ್ಟಿಕೊಂಡಿದ್ದರೆ ಅಂತಹ ಭಾವ ಮೊಳೆಯುತ್ತಿರಲಿಲ್ಲದಿರಬಹುದು. ಹೈಸ್ಕೂಲು ಮುಗಿಸಿದ ಹುಡುಗರು ಗುಟ್ಕಾ,ಸಿಗರೇಟು,ಶರಾಬು,ಬೈಕು ಎಂದು ಹಣ ಪೋಲು ಮಾಡುವುದು ಎಲ್ಲೆಲ್ಲೋ ಯಾವ್ಯಾವುದೋ ಕೆಲಸ ಮಾಡುತ್ತೇನೆಂದು ಊರೂರು ಅಲೆಯುವುದನ್ನು ನೋಡಿದ ತಾಯಂದಿರ ಕರುಳು ಕಿತ್ತುಬರದೇ ಇರುತ್ತದೆಯೇ.? ಕಾನೂರಿನ ತಾಯಂದಿರ ಸ್ವಭಾವ ಮಾತ್ರ ಎಷ್ಟು ದ್ವಂದ್ವವಾಗಿ ಕಾಣುವುದೆನ್ನುವುದಕ್ಕೆ ಸಣ್ಣ ಉದಾಹರಣೆಗೆ ,ಗದ್ದೆ, ಬೇಣಗಳನ್ನೆಲ್ಲ ಬೋಳಿಸಿ ಅಡಿಕೆ ಮರ ನೆಟ್ಟು ಲೊಡುಗಟ್ಟಲೆ ಸುಪಾರಿ ಬೆಳೆಯುವ ಅವರಿಗೆ ಅದೇ ಅನ್ನ ನೀಡುವ ತಾಯಿಯಂತೆ ಕಾಣುತ್ತದೆ. ಜಗತ್ತೆಲ್ಲ ಪಾನು,ಗುಟಕಾ ಸೇವಿಸುವುದಕ್ಕೆ ಯಾವ ಅಡ್ಡಿಯೂ ಇಲ್ಲದ ಇವರಿಗೆ ತಮ್ಮ ಮನೆ ಮಕ್ಕಳು ಮಾತ್ರ ತಂಬಾಕಿನ ಕವಳ ಹಾಕಿದರೂ ಸಹಿಸಲಾಗುವುದಿಲ್ಲ.
ಪಾನು, ಗುಟಕಾ ಹಾಕಿ ಹಲ್ಲು ಕೆಂಪಗಾಗಿಸಿಕೊಂಡವನಿಗೆ ಯಾರು ಹೆಣ್ಣು ಕೊಡುತ್ತಾರೆ ಎನ್ನುವುದು ಅವರ ವಿಚಾರ. ಇದ್ದರೂ ಇರಬಹುದು‌. ಕಾನೂರಿನಲ್ಲಿ ಯಾವಾಗ ಎಂತೆಂತಹ ಮನೋಭಾವ ಬೆಳೆದಿರುತ್ತದೆ ಎಂಬುದಕ್ಕೆ ಯಾವುದೇ ನಿರ್ದಿಷ್ಟತೆ ಇಲ್ಲ. ಬೇರೆಲ್ಲ ಸಮಾಚಾರಕ್ಕಿಂತ ಸಂಸ್ಕೃತಿಯ ವಿಷಯದಲ್ಲಿ ಮಾತ್ರ ಅದು ಪಾರ್ಥೇನಿಯಂನಂತೆ ಹಬ್ಬಿರುತ್ತದೆ‌. ಪಟ್ಟಣದ ನಾಗರಿಕರು ಎಷ್ಟು ನೀಟಾಗಿ ಸುಂದರ ಸುಸಂಸ್ಕೃತವಾಗಿ ಕಾಣುತ್ತಾರೋ ಅವರ ವ್ಯಸನಗಳೂ ಅಷ್ಟೇ ಸಫೆಸ್ಟಿಕೇಟೆಡ್ ಆಗಿರುತ್ತದೆಯೆಂದು ಇಲ್ಲಿನ ತಾಯಂದಿರಿಗೆ ಕಾಣುವುದಿಲ್ಲ. ಹಳ್ಳಿ ಹಳ್ಳಿಯಾಗೇ ಇರುತ್ತದೆಯೆಂದು ನಗರವಾಸಿಗಳು ಭಾವಿಸಬಹುದು. ಅದು ನಿಜವಲ್ಲ. ಹಳ್ಳಿಯ ಹರಯದ ಹುಡುಗರಿಗೆ ನಗರದ ಕನಸು ಹೆಣ್ಣಿನ ಆಸೆಯಂತೇ ಪುಟಿಯುತ್ತಿರುತ್ತದೆ‌. ಶಹರದ ಸೌಲಭ್ಯಗಳು ದೊರಕದ ಮಾತ್ರಕ್ಕೆ ಹಳ್ಳಿ ಯಾವಾಗಲೂ ಹೀಗೇ ಇರುತ್ತದೆಯೆಂದು ತಿಳಿಯುವುದು ದಡ್ಡತನ. ಹೊಸ ಹುಡುಗ ಹುಡುಗಿಯರಿಗೆ ಬೆಂಗಳೂರಿನ ಸ್ವಪ್ನ ನಿದ್ದೆಗೆಡಿಸುವುದಕ್ಕೆ ಪರಿಹಾರ ಇಲ್ಲದ ಹಾಗೇ ಹಳ್ಳಿ ಬದಲಾಗುವುದನ್ನು ತಡೆಯುವುದಕ್ಕೂ ಸಾಧ್ಯವಿಲ್ಲ. ಬದಲಾವಣೆ ಬೆಂಗಳೂರಿಗೆ ಮಾತ್ರ ಬೇಕು ಅನ್ನುವುದೂ ಸರಿಯಲ್ಲ. ಮೂಲೆಯ ಹಳ್ಳಿ ಕಾನೂರಿಗೂ ಹೊಸ ಅಂಗಿ ಧರಿಸಬೇಕೆಂಬ ಆಶೆಯಾಗುವುದರಲ್ಲಿ ತಪ್ಪೇನೂ ಇಲ್ಲ.
ಮಡಿ ಮೈಲಿಗೆಯಿಲ್ಲದ ಬೆಂಗಳೂರಿಗೆ ರೋಗ ಬರದೇ ಕಾನೂರಿಗೆ ರೋಗ ತಗುಲುತ್ಯೇ ಅನ್ನುವ ಮಡಿವಂತ ಮುಟ್ಠಾಳರಿಗೆ ತಮ್ಮ ಮಕ್ಕಳು ಬೆಂಗಳೂರಿಂದ ಕಳಿಸುವ ತಿಂಗಳೊಪ್ಪತ್ತಿನ ನೋಟುಗಳು ಹೇಗೆ ಬಂದುವು ಎಂದು ಕೇಳುವ ಧೈರ್ಯವಾಗುವುದಿಲ್ಲ. ಮೈಲಿಗೆ ತಗುಲದೇ ಮಡಿಯ ವ್ಯಾಮೋಹ ಕಳಚಿಕೊಳ್ಳುವುದು ಸಾಧ್ಯವಾಗಿದ್ದರೆ ಇಪ್ಪತ್ತೈದರ ಹರಯದಲ್ಲೇ ವೈಧವ್ಯ ಅಂಟಿಸಿಕೊಂಡ ಮಂಗಲೆಯನ್ನು ನೋಡಿ ಮರುಕ ಹುಟ್ಟುತ್ತೆ. ಅವಳದ್ದು ತಪ್ಪು ಎಂದು ಹೇಳುವುದಿಲ್ಲ‌. ಆದರೆ ಸರಿಯನ್ನಾದರೂ ಅಪ್ಪಿಕೊಳ್ಳಬಹುದಿತ್ತೇನೋ ಎಂದನಿಸುತ್ತದೆ.
ನಗರಗಳ ಗಾಳಿ ಬೀಸುವವರೆಗೂ ಹಳ್ಳಿಯಲ್ಲಿ ಶತಮಾನಗಳಿಂದ ಲಸಿಕೆ ಸಿಗದೇ ನಾರುತ್ತಿರುವ ರೋಗಗಳು ಹಾಗೇ ಸಾಂಕ್ರಮಿಸುತ್ತಲೇ ಇರುತ್ತದೆ. ಶತಮಾನದಿಂದ ಶತಮಾನಕ್ಕೆ ತಲೆಮಾರಿನಿಂದ ತಲೆಮಾರಿಗೆ...
ಹಳೆಯ ಪಂಚೆಯನ್ನೇ ತೊಳೆದು ತೊಳೆದು ಉಡುವ ಕಾನೂರಿನ ಹಳೆಯ ಜನಕ್ಕೆ ತಮ್ಮೂರ ಮಕ್ಕಳು ಇಂಗ್ಲೀಷಿನ ಪ್ಯಾಂಟು ಧರಿಸುವುದನ್ನು ನೋಡಿ ಹೆಮ್ಮೆಯಾಗುವುದರಲ್ಲಿ ನನಗೇನೂ ವಿರೋಧಾಭಾಸ ಕಾಣಿಸುವುದಿಲ್ಲ. ಊರಲ್ಲೇ ಉಳಿದ ಮಂಗಲೆಯಂತ ಎಷ್ಟೋ ಯುವಕ- ಯುವತಿಯರು ಮಾತ್ರ ಹೊಸ ಪ್ಯಾಂಟೂ ಸಿಗದೆ ಹಳೇ ಪಂಚೆಯೂ ಸಿಗದೆ ಬೆತ್ತಲಾಗುವುದನ್ನು ತಡೆಯಲು ನಮ್ಮ ನಿಮ್ಮಿಂದ ಸಾಧ್ಯವಾಗುವ ಮಾತಾದರೂ ಹೌದೇ..?

- ರತೀಶ ಹೆಬ್ಬಾರ.

ಸದ್ಯದ ಬರ್ಯಾಣ

DEJA-VU

ಕಾನೂರಿನಲ್ಲಿ ಇಂತಾ ಫಟಿಂಗರ ಸಂಖ್ಯೆ ತುಂಬಾ ಏನಿಲ್ಲ‌. ವೆಂಕಣ್ಣ ಅಂತ ಮಹಾಫಟಿಂಗರ ಸಾಲಿಗಂತೂ ಸೇರಿಸೋದಕ್ಕೆ ಲಾಯಕ್ಕಿಲ್ಲ. ಅವನ ಕರಾಮತ್ತು ಹೇಳಿಕೊಳ್ಳುವಂತ ಘನಾಂದಾರಿದು ಅ...

ಟಾಪ್ ಓದಾಣ