ಮಲೆನಾಡಿನ ಜಮೀನುದಾರ ವಂಶದ ಜಗನ್ನಾಥ ಲಂಡನ್ನಿನಲ್ಲಿ ಓದಿ ಬಂದವನು. ತನ್ನ ಊರಿನ ವಾಸ್ತವತೆಯನ್ನು ಅರಿತು ಈ ದೇಶದ ದಲಿತರ,ಕೆಳಜಾತಿಯವರ ಮೇಲೆ ನಡೆದ ಶೋಷಣೆಯನ್ನು ಗ್ರಹಿಸಿ ತಾನು ಇದಕ್ಕೇನಾದರೂ ಮಾಡಲೇಬೇಕೆಂದು ಕ್ರಾಂತಿಯ ಆಸೆ ಮೂಡಿಸಿಕೊಂಡವನು. ಊರಿನಲ್ಲಿ ಆಚರಿಸಲ್ಪಡುತ್ತಿದ್ದ ಅಸ್ಪ್ರಶ್ಯತೆ,ಜಾತಿ ತಾರತಮ್ಯ, ಮೊದಲಾದವುಗಳನ್ನು ಅನಾಚಾರಗಳೆಂದು ತಿಳಿದು ಹೊಲೆಯರ ಉದ್ಧಾರವಾಗದೇ ಈ ಊರು ಚಲಿಸುವುದಿಲ್ಲ;ಇದ್ದಂತೆಯೇ ತೆವಳುತ್ತಿರುತ್ತದೆ,ಇಲ್ಲಿ ಈ ಬ್ರಾಹ್ಮಣಶಾಹೀ ಪರಿಸರದ ಮುಕ್ತಾಯವಾಗದೇ ಏನೂ ಹೊಸತು ಹುಟ್ಟುವುದಿಲ್ಲವೆಂದು ಭಾವಿಸಿ ಭಾರತೀಪುರದಲ್ಲಿ ಮಂಜುನಾಥನ ಸನ್ನಿಧಿಗೆ ಹೊಲೆಯರ ಪ್ರವೇಶದ ಕನಸು ಕಾಣುತ್ತಾನೆ. ಅವರಿಗೆ ಅಕ್ಷರಾಭ್ಯಾಸ ಮಾಡಿಸುವ ಪ್ರಯತ್ನ ಮಾಡುತ್ತಾನೆ. ಆದರೆ ಎಷ್ಟೇ ತಾನು ಅವರನ್ನು ಹತ್ತಿರವಾಗಿಸಿಕೊಳ್ಳಲು ಪ್ರಯತ್ನಿಸಿದರೂ ಈ ಹೊಲೆಯರು ಈ ಕಟ್ಟುಪಾಡುಗಳಿಂದ ಆಚೆ ಬರಲು ಹೆಣಗುತ್ತಾರೆಂದರೆ ಅದೆಷ್ಟು ಆಳವಾಗಿ ಮೌಢ್ಯವನ್ನು ಬಿತ್ತಲಾಗಿದೆಯೆಂಬುದನ್ನು ಪರಾಮರ್ಷಿಸುತ್ತಾನೆ.
ಅನಂತಮೂರ್ತಿಯವರು ತಮ್ಮ ಕತೆಗಳಲ್ಲಿ ಲೈಂಗಿಕ ಸ್ವಾತಂತ್ರ್ಯದ ಬಗ್ಗೆಯೂ ಹಲವಾರು ಬಾರಿ ಧ್ವನಿಯೆತ್ತಿದಂತೆಯೇ ಇದರಲ್ಲೂ ಜಗನ್ನಾಥನ ಮುಖೇನ ಬ್ರಾಹ್ಮಣರು ಹೊಲೆಯ ಹೆಂಗಸರನ್ನು ಮೋಹಿಸುವುದನ್ನೂ ಆದರೆ ಹೊಲೆಯರು ಬ್ರಾಹ್ಮಣ ಹೆಂಗಸರನ್ನು ಮುಟ್ಟಿದರೆ ಅದು ಅಪರಾಧವೆಂಬ ಛಾಯೆಯನ್ನು ಹೊಡೆದೋಡಿಸಲು ಪ್ರಯತ್ನಿಸುತ್ತಾರೆ. ಯಾವಾಗ ಬ್ರಾಹ್ಮಣ ಹೆಂಗಸರಿಗೆ ಹೊಲೆಯನ ಕಪ್ಪು ದೇಹದ ಮೇಲೆ ಮನಸ್ಸಾಗುವುದೋ ಹಾಗೇ ಮಲ್ಲಿಗೆ ತುರುಬಿನ ಹೊಲೆಯ ಹೆಂಗಸಿನ ಮೇಲೆ ಬ್ರಾಹ್ಮಣನಿಗೆ ಮನಸಾಗುವುದೋ ಹಾಗಾದರೆ ಮಾತ್ರ ಈ ಅಸ್ಪ್ರಶ್ಯತೆಯ ಕಂದಕಗಳನ್ನು ದೂರಮಾಡಲು ಸಾಧ್ಯವೆಂಬುದನ್ನು ಪರಿಗ್ರಹಿಸುತ್ತಾರೆ.
ದೇವರ ಮೇಲಿನ ನಂಬಿಕೆ ಕಳೆದುಕೊಳ್ಳದೇ ಈ ಜನ ಮುಂದೆ ಬರುವುದಿಲ್ಲವೆಂಬ ಭಾವನೆ ಜಗನ್ನಾಥನದ್ದಾಗಿದ್ದೂ ಆತ ನಿರೀಶ್ವರವಾದಿಯಾಗಿದ್ದುಕೊಂಡು ಹೊಲೆಯರನ್ನು ಮಂದಿರ ಪ್ರವೇಶಕ್ಕೆ ಕರೆ ಕೊಡುವುದು ವಿರೋಧಾಭಾಸಕ್ಕೆ ಒಳಗಾದರೂ ಅದು
ಸಮಾನತೆಯ ಹಾದಿಯಲ್ಲಿ ಔಚಿತ್ಯಪೂರ್ಣವಾದದ್ದೇ ಆಗುತ್ತದೆ. ಸಾಲಿಗ್ರಾಮವನ್ನು ತಾನಾಗಿಯೇ ತಂದೊಡ್ಡಿದರೂ ಈ ಹೊಲೆಯರು ಮುಟ್ಟುವುದಿಲ್ಲವೆಂಬ ಸತ್ಯ ಕಂಡು ಖಿನ್ನನಾಗುವ ಜಗನ್ನಾಥ ಆಳವಾಗಿ ಬೇರೂರಿದ ಈ ವ್ಯವಸ್ಥೆಯನ್ನು ಬುಡಮೇಲು ಮಾಡುವುದು ಎಷ್ಟು ಜಟಿಲವಾದ್ದು ಎಂಬುದನ್ನು ಮನಗಾಣುತ್ತಾನೆ. ಹೊಲೆಯರಲ್ಲಿ ಭೂತರಾಯನ ನಂಬಿಕೆ ಉಳಿಸುವ ಸಲುವಾಗಿಯೇ ನಡೆಸುವ ಮಸಲತ್ತುಗಳು ಹೇಗೆ ಅವರನ್ನು ದಾಸ್ಯದ ನೆರಳಲ್ಲೇ ಬದುಕುವಂತೆ ಮಾಡುತ್ತದೆಯೆಂಬುದರ ಚಿತ್ರಣವನ್ನು ನೀಡುತ್ತಾರೆ.
"ರುಚಿಯಾದ ಕೂಳು ಬೇಯಿಸಲೆಂದೇ ಬದುಕುವ ಈ ಹೆಂಗಸರು;ಹೊಟ್ಟೆ ಸೇರಿದ ಈ ಕೂಳು ಪಾಯಿಖಾನೆಯಾದುದನ್ನು ಎತ್ತಲೆಂದೇ ಬದುಕುವ ಹೊಲೆಯರು; ಏತನ್ಮಧ್ಯೆಯೇ ಆಹಾರವನ್ನು ಜೀರ್ಣಿಸಿಕೊಳ್ಳುತ್ತ ಚಾವಡಿಯ ಮೇಲೆ ಕೂರುವ ಭಾರತೀಪುರದ ಪೌರರು" ಎಂದು ಲೇಖಕರು ಭಾರತೀಪುರದ್ದಷ್ಟೇ ಅಲ್ಲ ಇಡೀ ಭಾರತೀಯ ಸಮಾಜದ ಬ್ರಾಹ್ಮಣಶಾಹೀ ವ್ಯವಸ್ಥೆಯನ್ನು ಟೀಕಿಸುತ್ತಾರೆ.
"ಹೊಲೆಯನಿಲ್ಲದಿದ್ದರೆ ಅನುಭಾವಿಯ ಹೇಲೂ ನಾರುತ್ತದೆ ಎಂಬ ಪ್ರಜ್ಞೆ ಹುಟ್ಟಿದರೆ ಕಾಲ ಚಲಿಸುತ್ತದೆ" ಎನ್ನುವ ಮೂಲಕ ಹೊಲೆಯನನ್ನು ಕಂಡು ಮುಖ ತಿರುಗಿಸುವ ಮೇಲ್ವರ್ಗದವರನ್ನು ಜರಿಯುತ್ತಾರೆ. ಬ್ರಾಹ್ಮಣನಾಗಿದ್ದೂ ಕೆಳವರ್ಗದವರ ದನಿಯಾಗುವಾಗ ಎದುರಿಸುವ ನಿಕೃಷ್ಟವನ್ನು ತಲೆ ಮೇಲೆ ಹೊತ್ತು ಮುನ್ನಡೆಯುವ ಜಗನ್ನಾಥನ ನಿರ್ಧಾರ ಅಚಲವಾದದ್ದು. ಅದರ ಫಲವಾಗಿಯೇ ಕೊನೆಗೂ ಹೊಲೆಯರನ್ನು ಮಂಜುನಾಥನ ದೇವಾಲಯವನ್ನು ಪ್ರವೇಶಿಸುವಂತೆ ಮಾಡುವಲ್ಲಿ ಸಫಲನಾಗುತ್ತಾನೆ. ಆದರೆ ಗಣೇಶಭಟ್ಟನ ಚರಿತ್ರೆ ಇಲ್ಲಿ ಇನ್ನೂ ಮುಖ್ಯವಾಗುತ್ತದೆ. ಕಾರಣ ಬ್ರಾಹ್ಮಣ ಪುರೋಹಿತನ ಮಗನಾಗಿ ಆತನ ನಾಸ್ತಿಕ ವಿಚಾರಗಳೂ, ಸಂಪ್ರದಾಯದ ಕಟ್ಟೆಯೊಳಗಿನ ಮೌಢ್ಯಗಳು ಆತನನ್ನು ಹೇಗೆ ಮಾನಸಿಕ ಸ್ಥಿಮಿತ ಕಳೆದುಕೊಳ್ಳುವಂತೆ ಮಾಡಿತೆಂಬುದು ಹಲವಾರು ಪ್ರಾತ್ಯಕ್ಷಿಕ ಉದಾಹರಣೆಗಳ ಅಭಿವ್ಯಕ್ತಿಯಾಗುತ್ತದೆ. ನೀಲಕಂಠ ಸ್ವಾಮಿಯ ರಾಜಕೀಯ ಉದ್ದೇಶಪೂರಿತ ವ್ಯಕ್ತಿತ್ವವು ಮಂಜುನಾಥನ ಮೂರ್ತಿ ಇಲ್ಲವಾದಾಗ ನಡೆದುಕೊಂಡ ರೀತಿಯಿಂದ pseudo ಮನೋಭಾವವನ್ನು ಪ್ರತಿನಿಧಿಸುತ್ತದೆ. ಜನ ಹೇಗೆ ಅಷ್ಟು ಸುಲಭವಾಗಿ ಭೂತರಾಯನ ಕ್ರಿಯೆಯೆಂದು ನಂಬಿದರೆಂಬುದು ಜಗನ್ನಾಥನಿಗೆ ದ್ವಂದ್ವವಾಗಿ ಈ ಭಾರತೀಪುರದ/ಭಾರತೀಯ ಜನರ ಮನಸ್ಥಿತಿಯನ್ನು ಬದಲಾಯಿಸುವುದು ಅಷ್ಟು ಸುಲಭದ್ದಲ್ಲವೆನ್ನುವಲ್ಲಿಗೆ ಕಾದಂಬರಿ ಮುಗಿಯುತ್ತದೆ.
ದಕ್ಕಬೇಕಾದ್ದನ್ನು ದಕ್ಕಿಸಿಕೊಳ್ಳುವಂತೆ ಮಾಡಲು ಕೆಳವರ್ಗದವರನ್ನು ಬಂಡಾಯವೇಳಿಸುವ ರೊಚ್ಚಿಗೆ ಬೀಳುವಂತೆ ಮಾಡುವ ಜಗನ್ನಾಥನ ಪ್ರಯತ್ನವನ್ನು ಮಟ್ಟಹಾಕುವ ಶಕ್ತಿಗಳು ಹೇಗೆ ಈ ವ್ಯವಸ್ಥೆಯನ್ನು ಹಿಡಿದಿಟ್ಟುಕೊಂಡಿದ್ದಾರೆ ಎಂಬುದರ ಚಿತ್ರಣವನ್ನು ಲೇಖಕರು ಓದುಗರಿಗೆ ನೀಡುತ್ತಾರೆ. ಗಾಂಧಿ,ಲೋಹಿಯಾ,ಮಾರ್ಕ್ಸ್ ವಿಚಾರಗಳಿಂದ ಪ್ರಭಾವಿತನಾದ ಜಗನ್ನಾಥನ ಮುಖಾಂತರ ಅಭಿವ್ಯಕ್ತಿಸಿದ ಕಥಾನಕವು ಲೇಖಕರ ಸಮಾಜವಾದದ ದೃಷ್ಟಿಕೋನವನ್ನೂ ಓದುಗನಿಗೆ ತಲುಪಿಸುವಲ್ಲಿ ಅನಂತಮೂರ್ತಿಯವರು ಗೆದ್ದಿದ್ದಾರೆ. ಎಷ್ಟು ಬೇಕೋ ಅಷ್ಟು ಮಾತ್ರ
ವಿಷಯಗಳನ್ನು ಪ್ರತಿಪಾದಿಸುವ ಮೂಲಕ ಎಲ್ಲಿಯೂ ಎಳೆದಂತೆನಿಸದೇ,ಭಾಷೆಯೂ ಅಷ್ಟೇ ಹಿಡಿತದಿಂದ ಒಂದು ಸಶಕ್ತ ಕಾದಂಬರಿಯಾಗಿ ಭಾರತೀಪುರ ನಮ್ಮೆದುರಿಗಿದೆ.
