ಕಣ್ಣಾಯಿಸಿದವರು

Friday, 24 April 2020

ದಾಟು

ದಾಟು

ಜಾತಿ ಎಂಬುದು ನಮ್ಮಲ್ಲಿ ಎಂದಿನಿಂದ ರೂಢಿಯಲ್ಲಿತ್ತು ಯಾವಾಗ ಅದು ಸಮಸ್ಯೆಯಾಯಿತು ಎಂಬ ಅರಿವು ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ಅದರ ತಾರ್ಕಿಕ ಅಧ್ಯಯನ ಅಗತ್ಯವಾದದ್ದು. ಆ ಹಿನ್ನೆಲೆಯಲ್ಲಿ ಜಾತಿಪದ್ಧತಿಯ ಪರಿಣಾಮಗಳು ಸಮಾಜದಲ್ಲಿ ಯಾವ ರೀತಿಯಲ್ಲಿ ಅಸಮಾನತೆಯ ಕಂದಕಗಳನ್ನು ಸೃಷ್ಟಿಸಿವೆ ಎನ್ನುವ ತಿಳುವಳಿಕೆ ನಮಗಿರಬೇಕಾದದ್ದು. ಗಾಂಧಿಯವರ ಸತ್ಯಾಗ್ರಹ,ಜ್ಯೋತಿ ಬಾಫುಲೆ ಯವರ ಶಿಕ್ಷಣದ ಜಾಗೃತಿ ಹೇಗೆ ಸಮಾಜದ‌ಲ್ಲಿ ಕೆಳವರ್ಗದವರೆಂದು ಗುರುತಿಸಲಾದವರನ್ನು ಮೆಲಕ್ಕೆತ್ತಲು ಪರಿಣಾಮ ಬೀರಿತ್ತೆಂಬುದು  ಕಾಣಸಿಗುತ್ತದೆ. ದಲಿತ ಸಾಹಿತ್ಯದ ಏರುಗತಿಯ ಸಮಯದಲ್ಲಿ ಈ ಕಾದಂಬರಿ ಸಮಾಜದ ವರ್ಗ ಕೇಂದ್ರಿತ ವ್ಯವಸ್ಥೆಯ ಬಗೆಗಿದ್ದ ಧೋರಣೆಗಳನ್ನು ಬಿಂಬಿಸುವಲ್ಲಿ ಪ್ರಮುಖ ಸ್ಥಾನ‌ ಹೊಂದುತ್ತದೆ.
ಕಾದಂಬರಿಯ ಕೇಂದ್ರಬಿಂದುವಾಗಿ ಬ್ರಾಹ್ಮಣ ಕನ್ಯೆ ಸತ್ಯ ಮತ್ತು ಕ್ಷತ್ರಿಯ ಹುಡುಗ ಶ್ರೀನಿವಾಸ( ತಿರುಮಲೇಶ ಗೌಡ) ರ ನಡುವಿನ ಪ್ರೇಮದೊಂದಿಗೆ ಅಂಟಿಕೊಂಡ ಕತೆ ರಾಜಕೀಯ ವ್ಯವಸ್ಥೆ, ಸಾಮಾಜಿಕ ಸ್ಥಿತಗತಿಗಳನ್ನು ಆಳವಾಗಿ ಮನದಟ್ಟು ಮಾಡುವತ್ತ
ಹೆಜ್ಜೆಹಾಕಿದೆ. ಮುಂದೆ ನಮ್ಮ ಮಕ್ಕಳ ಕಾಲದಲ್ಲಿ ಎಲ್ಲ ಸರಿಯಾಗಿಬಿಡುತ್ತದೆ ಎಂದು ಕೂರುವುದಕ್ಕಿಂತ ಆ ಬದಲಾವಣೆ ನಮ್ಮಿಂದಲೇ ಏಕಾಗಾಬಾರದು ಎಂಬ ಮನೋಭಾವದ ಸತ್ಯ ಜಾತಿವ್ಯವಸ್ಥೆಯ ಮೇಲೆ ನಂಬಿಕೆಯನ್ನು ತೊರೆದಿದ್ದಳು. ಬ್ರಾಹ್ಮಣ,ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ಸ್ತರಗಳಿಂದ ಸಮಾಜವ್ಯವಸ್ತೆಯು ಒಡೆದುಹೋಗಿದೆ ಎಂದು ಭಾವಿಸಿದ್ದಳು. ಇದನ್ನು ತೊಡೆಯುವ ಹಾದಿಯಲ್ಲಿ ಅಂತರ್ಜಾತಿ ವಿವಾಹ ಪ್ರಮುಖ ಮಾರ್ಗ ಎಂದೂ ಅವಳ ಭಾವನೆ. ಇವುಗಳ ಮೂಲಕ ೬೦-೭೦ ರ ದಶಕದ ಸಾಮಾಜಿಕ ಸ್ಥಿತ್ಯಂತರಗಳನ್ನು ಉಲ್ಲೇಖಿಸುವ ಕಾದಂಬರಿಯು ದಲಿತರು,ಹರಿಜನರು ತಮ್ಮ ಸಮಾನತೆಗಾಗಿ ಮಂದಿರಪ್ರವೇಶದಂತಹ ಸಾಹಸಕ್ಕೆ ಕೈ ಹಾಕುವ ಘಟನೆಗಳು ನಡೆಯುತ್ತದೆ. ಈ ಕೃತ್ಯಕ್ಕೆ ಸರ್ಕಾರದ ಬೆಂಬಲವು ಹೇಗೆ ರಾಜಕೀಯ ಕುಟಿಲತೆಗಳನ್ನು,ವೋಟ್ ಬ್ಯಾಂಕಿನ ಮಿಷನರಿಗಳನ್ನು ಹುಟ್ಟುಹಾಕಿತು ಎಂಬುದನ್ನು ಸೂಕ್ಷ್ಮವಾಗಿ ಬಿಚ್ಚಿಡುತ್ತದೆ.

ಶತಮಾನಗಳಿಂದ ಬಂದ ಅಸಮಾನತೆಯನ್ನು ಕ್ಷಣದಲ್ಲಿ ನಿವಾರಿಸಿಬಿಡಬಲ್ಲ ಕ್ರಾಂತಿ ಜರುಗಬೇಕೆಂಬ ಮೋಹನದಾಸ, ಗಾಂಧಿಯಾಶ್ರಮದಲ್ಲಿ ಶಾಂತಿಯ ಪಾಠ ಹೇಳಿಸಿಕೊಂಡ ಅಪ್ಪ ಎಮ್.ಎಲ್.ಎ ಬೆಟ್ಟಯ್ಯ,  ಜಾತಿಯನ್ನು ತಾನಾಗಿ ಬಿಟ್ಟರೂ ಅದು ತನ್ನ ಬಿಡದು ಎಂಬ ಮಾತಿನ ಶ್ರೀನಿವಾಸನ ಅಪ್ಪ ಮಂತ್ರಿಗಳು, ಊರ ಪಾಳೆಗಾರ ಮೇಲಗಿರಿ ಗೌಡ, ಇವರೊಂದಿಗೆ ತನ್ನ ಅಂತಸ್ತಿನಲ್ಲಿ ಯಾವ ಕಮ್ಮಿಯೂ ಇರಬಾರದೆಂಬ ಮನಸ್ಥಿತಿಯ ಸತ್ಯಳ ಅಣ್ಣ ವೆಂಕಟೇಶ, ಮಗಳು ಪರಜಾತಿಯವನನ್ನು ಮದುವೆಯಾಗುತ್ತಾಳೆ ಎಂದು ನೊಂದು ತನ್ನ ಆಜೀವ ಪರ್ಯಂತ ನಡೆಸಿಕೊಂಡು ಬಂದಿದ್ದ ಪೂಜೆ,ಪುನಸ್ಕಾರಗಳಲ್ಲಿ ಕೊನೆಗೆ ದೇವರಲ್ಲಿಯೂ ನಂಬಿಕೆ ಕಳೆದುಕೊಂಡು ಮಾನಸಿಕ ಅಸ್ವಸ್ಥನಾಗಿ ಸಾಯುವ ಅಪ್ಪ ವೆಂಕಟರಮಣಯ್ಯ, ಜಾತಿಯ ಗೋಡೆ ಒಡೆಯುವ ಕ್ರಿಯೆಯಲ್ಲಿ ತಾನೂ ಭಾಗವಾಗಿದ್ದೇನೆಂದು ಭಾವಿಸಿದ ಮಾದಿಗ ಬೆಟ್ಟಯ್ಯನ ಮಗಳು ಮೀರಾಳ ನಿರ್ಭಾಗ್ಯವಂತ ಸಾವು, ಇವೆಲ್ಲಕ್ಕೆ ತಳುಕಿಹಾಕಿಕೊಂಡು ಸಂಪ್ರದಾಯವಾದೀ ಮನಸ್ಥಿತಿಯ ಸಮಾಜ ಹೇಗೆ ಈ ವ್ಯವಸ್ಥೆಯನ್ನು ಪೋಷಿಸುತ್ತಾ ಬಂದಿದೆ ಎಂಬುದರ ಚಿತ್ರಣವನ್ನು ನೀಡುವಲ್ಲಿ ಭೈರಪ್ಪನವರು ಯಶಸ್ವಿಯಾಗಿದ್ದಾರೆ.

ಮತ್ತೆ ಮತ್ತೆ ಅದೇ ಜಾತಿಯ ಬಗೆಗಿನ  ಪಾತ್ರಗಳ ಅಭಿಪ್ರಾಯಗಳು, ಆಯಾ ಜಾತಿಯ ಜಾಗದಿಂದ ಇದರ ಬಗೆಗಿನ ಭಾವನೆಗಳನ್ನು ಬಿಡಿಸಿಹೇಳುವ ಪ್ರಯತ್ನದಲ್ಲಿ ಕಾದಂಬರಿಯ ಗಾತ್ರ ಹೆಚ್ಚಾಗಿಯೂ
ಹೇಳಿದ ವಿಷಯನ್ನೇ ತಿರು ತಿರುಗಿ ಹೇಳುತ್ತಿರುವ ಹಾಗೆಯೂ ಓದುಗನಿಗೆ ಭಾಸವಾಗುತ್ತದೆ‌. ಯಾವುದು ಸರಿ ಯಾವುದು ತಪ್ಪು  ಧರ್ಮ ಕರ್ಮಗಳ ಸಂಕೋಲೆಯಿಂದ ಹೊರಬಂದು ತೊಳಲಾಡುವ ಸತ್ಯ ಶೂದ್ರಳಂತೆ ತೋಟದಲ್ಲಿ ಕೆಲಸ ಮಾಡುವ ಬದುಕನ್ನೂ ಆಯ್ದುಕೊಂಡು ಶುದ್ಧ ಬ್ರಾಹ್ಮಣ ಪುರುಷರಂತೆ ಜನಿವಾರವನ್ನು ಧರಿಸಿ ಹವನಗಳನ್ನು ನಡೆಸುವುದೂ ಜಾತಿ ಭಾವನೆಯನ್ನೇ ಅವೇದ್ಯವಾಗಿಸಿಕೊಂಡು ಆಡುವ ಅಗ್ನಿಗೆ ಅಸ್ಪೃಶ್ಯತೆಯಿಲ್ಲವೆಂಬ ಮಾತು ಒಟ್ಟಿಗೆ ಕೂತು ಮೀರಾಳ ಕೈ ಅಡಿಗೆಯನ್ನೂ ಸೇವಿಸುವ ಅವಳ ಸ್ವಭಾವ ತಲತಲಾಂತರದಿಂದ ಬಂದ ಜಾತಿಯ ಕಂದಕವನ್ನೂ ಪಿತೃಪ್ರಧಾನ ವ್ಯವಸ್ಥೆಯನ್ನೂ ಬೊಟ್ಟುಮಾಡಿ ತೋರಿಸುತ್ತದೆ‌.

ಮಂತ್ರಿಗಳು ಪಕ್ಕಾ ರಾಜಕಾರಣಿಯಂತೆ ಜಾತಿಯನ್ನು ಹೇಗೆ ಬಳಸಿಕೊಳ್ಳಬಹುದೆಂಬುದರಲ್ಲೇ ತಮ್ಮ ಅಭಿಪ್ರಾಯ ಇಟ್ಟುಕೊಂಡವರಂತೆ ರಾಜಕೀಯ ವ್ಯವಸ್ಥೆಯ ಸುತ್ತ ಲೇಖಕರು ಜಾತಿಯ‌ ಗೋಡೆಗಳು ಹೇಗೆ ಬೆಳೆದುಕೊಂಡಿದೆಯೆಂಬುದರ ಚಿತ್ರಣ ನೀಡುತ್ತಾರೆ‌.  ಮಾದಿಗ ಬೆಟ್ಟಯ್ಯನ ಮಗ ಮೋಹನದಾಸ ತಾನು ಶೂದ್ರನೆಂದು ಕೀಳು ಭಾವನೆಯಲ್ಲಿ ನಡೆಸಿಕೊಳ್ಳುವ ಸಮಾಜಕ್ಕೆ, ಬ್ರಾಹ್ಮಣರಿಗೆ ತಕ್ಕ ಪಾಠ ಕಲಿಸುವ ಇರಾದೆಯಲ್ಲಿ ಹೇಗೆ ಯುವಕರನ್ನೂ, ಅವನ ಸಮಾಜದವರನ್ನೂ ಕ್ರಾಂತಿಗೆ ಕರೆಕೊಡುತ್ತಾನೆಯೋ ಹಾಗೇ ಯಾವ ಸಮಾನತೆಗಾಗಿ ಸತ್ಯ ಅಪೇಕ್ಷೆಯಿಟ್ಟಿದ್ದಳೋ ಅದಕ್ಕಿಂತ ಕ್ರಾಂತಿ ಸ್ವಭಾವಿ ಮನಸ್ಥಿತಿಯಲ್ಲಿ ಬ್ರಾಹ್ಮಣ ದ್ವೇಷ ಭಾವವನ್ನೂ ಪಸರಿಸುತ್ತಾನೆ. ಬಹುತೇಕ ಕ್ರಾಂತಿಯಿಂದ ಸಮಾನತೆ ಬಯಸುವವರು ಮುಂದೆ ಶೋಷಣೆಯನ್ನೇ ನಡೆಸುತ್ತಾರೆ ಎಂಬ ಭಾವ ಅವನ ಮಾತುಗಳಿಂದ ವ್ಯಕ್ತವಾಗುವುದನ್ನು ಈ ಕಾಲಘಟ್ಟದಲ್ಲಿ  ಸಮಾನತೆಯ ಅಂಶ ಹೇಗಿರಬೇಕೆಂಬುದರ ಬಗ್ಗೆ ಖಚಿತ ನಿಲುವನನ್ನು ರೂಪಿಸಿಕೊಳ್ಳಲು ಓದುಗರಿಗೆ ಬಿಡುತ್ತಾರೆ. ಮಂದಿರ ಪ್ರವೇಶದ ಘಟನೆಯಲ್ಲಿ ಲೇಖಕರು ಏಕೆ ಮೋಹನದಾಸನು ಮೂರ್ಛೆಹೋಗುವ ಸನ್ನಿವೇಶವನ್ನು ಸೃಷ್ಟಿಸಿದರು ಎಂಬುದು ಲೇಖಕರು ಏನನ್ನು ಹೇಳ ಬಯಸುತ್ತಿದ್ದಾರೆ ಎಂದು ಗೊಂದಲಕ್ಕೀಡು ಮಾಡುತ್ತದೆ. ಅದು ಜಾತಿ ವ್ಯವಸ್ಥೆಯನ್ನು ತೊಡೆದುಹಾಕುವಲ್ಲಿ ಆತನ ಅತ್ಯುನ್ಮಾದದ ಕ್ರಿಯೆಯ ಅಪಾಯವನ್ನು ಪ್ರತಿನಿಧಿಸಿದೆಯೆಂದು ಭಾವಿಸಬೇಕೆ ಅಥವಾ ಹರಿಜನರ ದೇಗುಲ ಪ್ರವೇಶವನ್ನೇ ಧಿಕ್ಕರಿಸುವ ಬ್ರಾಹ್ಮಣೀಯ ಮನಸ್ಥಿತಿಯನ್ನು ಪ್ರತಿನಿಧಿಸುತ್ತದೆಯೇ??

ಮೋಹನದಾಸ ಡೈನಮೈಟುಗಳನ್ನು ಸಿಡಿಸಿ ಆಣೆಕಟ್ಟು ಒಡೆದು ಮಹಾ ಜಲಪ್ರಳಯವನ್ನು ಸೃಷ್ಟಿಸಿದ ಎಂಬ ರೂಪಕವು ಶತ ಶತಮಾನಗಳಿಂದ ನಡೆದುಬಂದ ಅಸಮಾನತೆಯ ಕಟ್ಟುಪಾಡುಗಳನ್ನು ಕ್ರಾಂತಿಯ ಹಾದಿಯಿಂದ ದಾಟಲು ಹಾಕಿದ ಹೆಜ್ಜೆ ಹೇಗೆ ವಿಧ್ವಂಸಕ,ವಿನಾಶಕ ಕೃತ್ಯವೆಸಗುತ್ತದೆ ಎಂಬುದನ್ನು ಭೈರಪ್ಪ
ಸೂಚ್ಯವಾಗಿಸಿದ್ದಾರೆ. ಸತ್ಯ ಇದಕ್ಕೆ ಅವನಿಗೆ ಮಾರ್ಗದರ್ಶಿಯಾಗಿದ್ದರೂ ಅವಳು ಈ ಪೈಶಾಚಿಕ ಮನೋಭಾವವನ್ನು ಎಂದೂ ಒಪ್ಪಿರಲಿಲ್ಲ. ಗುಡಿಯು ನೀರಿನಲ್ಲಿ ಮುಳುಗುತ್ತಿದ್ದಂತೇ ಈ ಜಾತಿಯ ದ್ವೇಷವೂ ಮುಳುಗಿ ಹೊಸ ಸಮಾಜದ ಸೃಷ್ಟಿಯಾಗುವುದೇ ಎಂಬುದನ್ನು ಸತ್ಯ ನೋಡುತ್ತಾ ನೋಡುತ್ತಾ ಬಿಕ್ಕುತ್ತಾಳೆ.. ಸತ್ಯ ಇವೆಲ್ಲವನ್ನೂ ನೋಡಿಯೂ ನೋಡದೇ ಮೌನವಾಗುತ್ತದೆ.

ದಲಿತ ಸಾಹಿತ್ಯದ ಏರುಪ್ರಾಯದ ಅವಧಿಯಲ್ಲಿನ ಈ ಕೃತಿಯ ಮಹತ್ವ ಇದೇ ವಿಧ್ವಂಸಕ ಕೃತ್ಯದ, ಸೇಡಿನ, ದ್ವೇಷದ ಮನೋಭಾವವನ್ನು ಹೊರಗಿಟ್ಟು ಸಮಾನತೆಯನ್ನು ಸಾಧಿಸಬೇಕಾದುದೇ ಹೊರತು ಈ ಪೈಶಾಚಿಕ ನಿಲುವು ಯಾವತ್ತಿಗೂ ವಿನಾಶಕಾರಕವೆಂಬ ಸಂದೇಶವನ್ನು ಕಟ್ಟಿಕೊಡುವಲ್ಲಿ ಲೇಖಕರು
ಸಫಲರಾಗಿದ್ದರೂ ಸಹ ಅಂತರ್ಜಾತೀಯ ಸಂಬಂಧಗಳ ಬಗ್ಗೆ  ನಿಲುವನ್ನು  ಓದುಗನಿಗೇ ಬಿಟ್ಟು ಕೈ ತೊಳೆದುಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ೨೦ನೇ ಶತಮಾನದ ಸಾಮಾಜಿಕ, ಸಾಂಸ್ಕೃತಿಕ ಬದುಕಿನ ಅಧ್ಯಯನಕ್ಕಾಗಿಯಾದರೂ ಓದಬೇಕಾದ ಮಹತ್ವದ ಕೃತಿಗಳ ಸಾಲಿಗೆ ಸೇರುತ್ತದೆ.

"ಜೀವನ ಪ್ರವಾಹವೇ ಇತಿಹಾಸ.ಯಾವೊಂದು ಸಿದ್ಧಾಂತದ ಬೆಳಕಿನಲ್ಲಿ  ಜೀವನವನ್ನು ಅರ್ಥ ಮಾಡಿಕೊಳ್ಳಲು ಹೊರಟರೂ ಅದರ ಆಳ ವೈಶಾಲ್ಯ ಸಂಕೀರ್ಣತೆಗಳು ಸಿಕ್ಕದಂತೆ ಆಗುತ್ತದೆ. ಆದರೆ ಸಿದ್ಧಾಂತಗಳೆಲ್ಲ ಹುಟ್ಟುವುದು ಜೀವನದಿಂದಲೇ. ಜೀವನವೇ ಸತ್ಯದ ಆಧಾರ,ಸಿದ್ಧಾಂತಗಳಲ್ಲ.ಇತಿಹಾಸವೂ ಹಾಗೆಯೇ.ಹೇಗೆ ಸತ್ಯದ ಹೆಸರಿನಲ್ಲಿ ಜೀವನವನ್ನು ವಿಕೃತಗೊಳಿಸಿ ನೋಡಬಾರದೋ , ಹಾಗೇ ಸಿದ್ಧಾಂತಕ್ಕೆ ಪಕ್ಕಾಗಿ ಇತಿಹಾಸವನ್ನು ತಿರುಗಿಸಬಾರದು.
-- ಎಸ್. ಎಲ್. ಭೈರಪ್ಪ"






Monday, 13 April 2020

ಬೆಳ್ದಿಂಗಳ್ ರಾತ್ರೀಲಿ

ಬೆಳ್ದಿಂಗಳ್ ರಾತ್ರೀಲಿ
ಸದ್ದಿಲ್ಲದ್ ಸಪ್ನ್ದಾಗ..
ನನ್ನಾಕಿ ಬತ್ತಾಳೆ ಕಾಣೀ..

ಎದಿ ಮ್ಯಾಲೆ ಹಣೆ ಮಡ್ಗಿ
ಬಿಸ್ಯುಸ್ರ ಹೃದ್ಯಾಗ
ಸಂದೇಸಾ ಕೊಡ್ತಾಳೆ ಕಾಣೀ..

ಈ ಭೂಮಿ ಮಲ್ಗ್ದಾಗ
ನಾವಿಬ್ರೇ ಎಚ್ರಾದಂಗ
ಚಂದ್ಚಂದ ಕನ್ಸ್ ಬಿಟ್ಟೋಗ್ತಾಳ್ ಕಾಣೀ...

ಸುತ್ತಾರು ಊರಲ್ಲಿ
ಗುಲ್ಲೆಬ್ಸಿ ಬಂದಾಳೆ
ಚಾಲೂ ಅದಾಳ್ ನಮ್ ರಾಣಿ...

ನೀ ಅಂದಂಗ್ ಸುಮ್ಕೆ
ನಾಕ್ ದಿವ್ಸ ತೆಪ್ಗೆ
ಬಿದ್ಕಂಡು ಮೈಯಾಗ ಬೇನಿ

ಮಲ್ಲಿಗಿ ತುರ್ಬ
ಮಕ್ರಂದ ಹರ್ಡಿ
ಸಂದಾಕೆ ಇಲ್ಕೇಳು ಜಾಣಿ

ಚಂದಾನ ಮೊಗ್ವೇ
ಸೂರ್ಯಂಗೆ ತೋರ್ಬ್ಯಾಡ
ಮಲ್ಲಿಗಿ ಬಾಡಿತ್ತು ಹೆಣ್ಣೀ..

ವೈಯ್ಯಾರ ನಿಂಗೀಗ
ಬೆಲ್ಲದ ಪಾನಕ
ಮೈಯ್ಯೆಲ್ಲ ಮಡ್ಗಿರು ಕಣ್ಣೇ..

ಸದ್ಯದ ಬರ್ಯಾಣ

DEJA-VU

ಕಾನೂರಿನಲ್ಲಿ ಇಂತಾ ಫಟಿಂಗರ ಸಂಖ್ಯೆ ತುಂಬಾ ಏನಿಲ್ಲ‌. ವೆಂಕಣ್ಣ ಅಂತ ಮಹಾಫಟಿಂಗರ ಸಾಲಿಗಂತೂ ಸೇರಿಸೋದಕ್ಕೆ ಲಾಯಕ್ಕಿಲ್ಲ. ಅವನ ಕರಾಮತ್ತು ಹೇಳಿಕೊಳ್ಳುವಂತ ಘನಾಂದಾರಿದು ಅ...

ಟಾಪ್ ಓದಾಣ