ಕಣ್ಣಾಯಿಸಿದವರು

Monday, 23 March 2020

ಸುಟ್ಕತೆಗಳು

೧.ಪ್ರೇಮಕಾಯ
ಆತನದ್ದು ತೀರಾ ಸಹಜ ಸಾವೆಂದು ದಾಖಲೆ ದಸ್ತಾವೇಜು ತಯಾರುಮಾಡಿ ಪ್ರಕರಣ ಮುಗಿಸಲಾಯಿತು.. ಪಾಪ!
ಪ್ರೇಮದ ಸುಳಿಯಲ್ಲಿ ಸಿಲುಕಿ ಉಸಿರುಗಟ್ಟಿದ್ದ
ಅವನಿಗೆ ಆಗ ತಾನೇ ಭೇಟಿಯಾದ ಪ್ರೇಮದ ಹೊಸಾ ಭಾಷೆ ಅರ್ಥವೇ ಆಗಲಿಲ್ಲ. ಹೇಗಾದೀತೇ ಹುಡುಗಿ?? ನೀ ಅವನಿಗೆ ವರ್ಣಮಾಲೆಯ ಪಾಠ ಇನ್ನೂ ಮುಗಿಸಿರಲಿಲ್ಲ. ಬೆರಗಿನಲಿ ಇಳಿಬಿದ್ದ ಹೆರಳತುದಿಯಿಂದ ಜಾರಿ ಆತ್ಮಹತ್ಯೆ ಮಾಡಿಕೊಳ್ಳುವಾಗ ಅವನು ಈಗ ತಾನೇ ಪ್ರೇಮಪಥಿಕನಾಗಿದ್ದ.. ಪ್ರೇಮದ ಹಾದಿ ಹಿಡಿಯುವುದು ಅಷ್ಟು ಸುಲಭದ್ದಲ್ಲ. ತೊರೆಯುವುದೂ ಸಸಾರವೇನಲ್ಲ. ಹೊಸದೊಂದು ಜಗತ್ತಿಗೆ ತೆರೆದುಕೊಳ್ಳುವಾಗ ಹಳೆಯ ಜಗತ್ತು ಮುಚ್ಚಿಕೊಳ್ಳುತ್ತದೆ. ಇವತ್ತಿನ ಜಗತ್ತಿಗೆ ಆತ ಸತ್ತಿದ್ದ. ಶವಪರೀಕ್ಷೆಯ ಫಲಿತಾಂಶವೂ ಆತನ ಸಾವನ್ನು ದೃಢೀಕರಿಸಿತ್ತು. ಹೌದು ಇಂದಿನ ಪ್ರೇಮಕ್ಕೆ ದೇಹವೊಂದಿರಬೇಕು..!  ಆದರೆ ಪ್ರೇಮ ದೇಹಕ್ಕೋ ಆತ್ಮಕ್ಕೋ..! ಕಾಯವಿಲ್ಲದ ಪ್ರೇಮಕ್ಕೆ ಯಾರೋ 'ಭ್ರಮೆ'ಯೆಂದು ಹೆಸರುಕೊಟ್ಟರಂತೆ..!   ಶಾರೀರಿಕ ಪ್ರೇಮದ ಪುರಾವೆ ಒದಗಿಸಲು  ನಕಲು ಸೃಷ್ಟಿಗೇನು ಕೊರತೆಯಿಲ್ಲ. ಆದರೆ ಅಗೋಚರ ಪ್ರೇಮದ ಸಾಕ್ಷಿಗೆ ಭ್ರಮೆಯೆಂಬುದು ಹುಟ್ಟಿಕೊಂಡಿತೇ? ಹಾಗಾದರೆ ಭ್ರಮೆಯೆಂಬುದು ಪ್ರೇಮದ ಸೃಷ್ಟಿಯೇ ಅಥವಾ ಭ್ರಮೆಯ ಸೃಷ್ಟಿ ಪ್ರೇಮವೇ ? ಇವೆರಡರ ಸೃಷ್ಟಿ ಕವಿತೆಯೇ,ಕಾವ್ಯವೇ,ಕಥೆಯೇ ಅಥವಾ ಇನ್ನೇನು? ಹಾಗಾದರೆ ಅವನೀಗ ಬರೀ ದಾಖಲೆಗಳಲ್ಲಿನ ಅವಶೇಷ.ಅವನು ಪ್ರೇಮಿಸಿದ್ದಾದರೂ ಏನನ್ನು? ಪ್ರೇಮಕ್ಕೆ ಕಾಯ ಬೇಕೇ ಆದರೆ ಪ್ರತಿ ಕಾಯದಲ್ಲೂ ಪ್ರೇಮವೊಂದಿರಬೇಕಲ್ಲವೇ..?
      ಅವನೆಂತ ಪಾಪಿ ಪ್ರೇಮವನ್ನೇ ಪ್ರೇಮಿಸಿದವನು ? ಅವನದ್ದು ಸಾವಲ್ಲ;ಹತ್ಯೆ.  ಅಗೋಚರ ಪ್ರೇಮದ ಇರಾದೆಯೇ ಅವನ ಸಾವಿನ ಕರ್ತೃ. ಹಾಗಾದರೆ ಪ್ರೇಮಕ್ಕೆ ಶಿಕ್ಷೆ ವಿಧಿಸಲುಬಹುದೇ? ಬೇರಾವುದೋ ಲೋಕದಿಂದ ಸಾವೆಂಬುದನ್ನು ಪಡೆಯುವುದೇ ಅಥವಾ ಆತ್ಮ ಆ ಲೋಕಕ್ಕೆ ತಲುಪುವುದು ಪ್ರೇಮವೇ ?ಅಥವಾ  ಹೀಗೆ ಪ್ರಶ್ನಿಸುವುದೂ ಪ್ರೇಮವೇ ತಾನೇ ....🤔 ಹಾಗೇ ನೋಡಿದರೆ ಸಾವೆಂಬುದೇ ನಿಗೂಢ. ಅಂತದ್ದರಲ್ಲಿ ಯಾರದ್ದು ತಾನೆ ಸಹಜ ಸಾವು? ಅದಕ್ಕೇ ಸಾವಿಗೊಂದು ಕಾರಣವಿರಬೇಕು. ಅಂದರೆ ನೀವು ಮೊದಲನೇ ಸಾಲಿನಲ್ಲಿನ ತಪ್ಪನ್ನು ಗುರುತಿಸಿಲ್ಲ ಎಂದಾಯಿತು ... 😄😶
                                     
                                 ೨.ಕಿಡ್ನ್ಯಾಪ್

"ಹೆಲ್ಲೋ ಮಿಸ್ಟರ್.!ನಿಮ್ಮ ಮಗ ಸೇಫಾಗಿ ಮನೆಗೆ ತಲುಪಬೇಕಂದ್ರೆ
ಟೂ ಕ್ರೋರ್ ಹಾರ್ಡ್ ಕ್ಯಾಶ್ ಈ ಅಡ್ಡ್ರೆಸ್ಗೆ  ಸಂಜೆ ಒಳಗೆ ತಲುಪಿಸಿ ಅದರ್ ವೈಸ್ ಡೆಡ್ ಬಾಡಿ ನೋಡ್ಬೇಕಾಗತ್ತೆ ಹುಷಾರ್"
... ಟುಂಗ್ ..ಟುಂಗ್.. ಹೆಲ್ಲೋ.. ಹೆಲ್ಲೋ..ಟೂಂಗ್..!
ನಗರದಲ್ಲಿ ಕೋಲಾಹಲ.ಈಗೆರಡು ವರ್ಷಗಳ ಹಿಂದೆ ಏಕಾಏಕಿ ಮಾರುಕಟ್ಟೆಯ ಮೇಲೆ ಅಧಿಪತ್ಯ ಸಾಧಿಸಿದ್ದ ಒಂದು ಆಹಾರೋತ್ಪನ್ನದ ಕಂಪನಿಯ ಮುಖ್ಯಸ್ಥ ನಾಪತ್ತೆಯಾಗಿದ್ದನಂತೆ.
ಪ್ರಮುಖ ಸುದ್ದಿವಾಹಿನಿಗಳಲ್ಲೆಲ್ಲ ಈ ಉದ್ಯಮಿಯದ್ದು ಕಿಡ್ನ್ಯಾಪ್ ಎಂದು ಸುದ್ದಿ ಬಿತ್ತರಗೊಂಡಿತು. ನಾಲ್ಕು ದಿನಗಳ ತದನಂತರದಲ್ಲಿ ಉದ್ಯಮಿ ತಾನಾಗಿಯೇ ವಿದೇಶದಿಂದ ಹಿಂತಿರುಗಿದ. ಯಾರಿಗೂ ಖಬರಿಲ್ಲದೇ ವಿದೇಶ ಪ್ರಯಾಣ ಮಾಡಿದ್ದ ಆತನ ನಾಪತ್ತೆ ಉದ್ಯಮ ಜಗತ್ತಿನಲ್ಲಿ ಕಳವಳಕ್ಕೆ ಎಡೆಮಾಡಿತ್ತು. ಈ ವರ್ಷ ಅವನ ಕಂಪನಿಯ ಉತ್ಪನ್ನ ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಬಿಕರಿಯಾಗಿ  ಕಂಪನಿಯ ಷೇರು ಮಾರುಕಟ್ಟೆ ಎತ್ತರಕ್ಕೇರಿತು.  ಆತನ ನಾಪತ್ತೆಯಿಂದಾಗಿ ರಾಜ್ಯಾದ್ಯಂತ ಕಂಪನಿ ಪ್ರಚಾರ ಪಡೆಯಿತು. ನಂತರದಲ್ಲಿ ಸಿಕ್ಕ ಮಾಹಿತಿಯ ಪ್ರಕಾರ ಇದು ಆತನ ಉದ್ದೇಶಪೂರಿತ ಯೋಜನೆಯೆಂಬುದು ತಿಳಿದುಬಂದಿತು. ಇನ್ನೆರಡು ವರ್ಷದ ನಂತರದಲ್ಲಿ ಆತ ಕೊಟ್ಯಾಧಿಪತಿಯಾಗಿ ದೇಶದಲ್ಲಿಯೇ ಸಿರಿವಂತರ ಪಟ್ಟಿಗೆ ಸೇರಿದ.ಮುಂದೊಂದು ದಿನ ಅವನ ಹದಿನಾರು ವಯಸ್ಸಿನ ಮಗ ಅಪಹರಣವಾಗಿದ್ದ‌ನೆಂಬ ಸುದ್ದಿ ಕೇಳಿ ಮಗನನ್ನು ಚಿಕ್ಕಂದಿನಿಂದ ನೋಡುತ್ತಿದ್ದ ಸುತ್ತಮುತ್ತಲಿನವರು ಮಗ ಅಪ್ಪನಿಗಿಂತ ಬುದ್ವಂತ ಎಂದು ಮಾತನಾಡಿಕೊಳ್ಳುತ್ತಿದ್ದರು.

                            ೩.ದೆವ್ವಗಳು ಇದ್ದಾವೆ ನಿಜ!!
                           
ಒಮ್ಮೆ  ರಾತ್ರಿಯ ೧೧ ಗಂಟೆಯ ಸಮಯದಲ್ಲಿ ತುಂಬಾ ದೂರ ಕಾರು ಚಲಾಯಿಸಿ ಬಳಲಿದ್ದರಿಂದ ಹೈವೇ ಪಕ್ಕದ ಡಾಭಾವೊಂದನ್ನು ಹೊಕ್ಕಿದೆ.ಆತುರದಲ್ಲಿದ್ದ ಕಾರಣ ಡಾಭಾದ ಹೆಸರು ನೋಡಲು ಮರೆತಿತ್ತು. ಶುದ್ಧ ಶಾಖಾಹಾರಿಯಾದ ನನಗೆ ಒಳಗೆ ಬಂದು ಕುಳಿತಾದ ಮೇಲೆ ನೆನಾಪಾಯಿತು. ಸುತ್ತ ಯಾರಾದರೂ ಗಿರಾಕಿಗಳು ಆಹಾರ ಸೇವಿಸುತ್ತಿದ್ದರೆ ಕಣ್ಣಾಯಿಸಿದರೆ ಅಂದಾಜಾಗುತ್ತದೆಯೆಂದು ನೋಡಿದೆ. ದುರದೃಷ್ಟಕ್ಕೆ ಒಬ್ಬ ನರಪಿಳ್ಳೆಯೂ ಇರಲಿಲ್ಲ. ಟೇಬಲ್ಲಿಗೆ ಆತುಕೊಂಡಿದ್ದ ಕುರ್ಚಿಯೊಂದನ್ನು ಸರಿಸುತ್ತಾ ಕುಳಿತೆ. ಡಾಭಾದ ಆ ರಾತ್ರಿಯಲ್ಲಿ ಸ್ವಲ್ಪವೇ ಬೆಳಕಿನಲ್ಲಿ ಏಕಾಏಕಿ ಒಬ್ಬ ಮಾಣಿ ಬಂದು 'ಏನ್ ಕೊಡ್ಲಿ ಸಾರ್?' ಎಂದು ಕೇಳಿದ.. ಕಸಿವಿಸಿಯಿಂದ ಕೇಳಿದೆ 'ವೆಜ್ ಓನ್ಲಿ ಅಲ್ವಾ ?'ಅಂತ . ಅವನು ಒಂದು ವಿಧವಾದ ರೀತಿಯಲ್ಲಿ ನನ್ನನ್ನು ದಿಟ್ಟಿಸುತ್ತಾ ಹೌದು ಸಾರ್ ಎಂದು ತಲೆಯಲ್ಲಾಡಿಸಿದ. ಏನೇನಿದೆ ಎಂದು ಕೇಳುವುದರಲ್ಲಿದ್ದೆ ಅಷ್ಟರಲ್ಲಿ ಸಡನ್ ಲೈಟ್ ಆಫಾಯಿತು.!  ನಾಲ್ಕೂ ದಿಕ್ಕುಗಳಿಂದಲೂ ಕತ್ತಲು ಒಂದೇ ಸಮನೆ ಆವರಿಸಿತು.ಜೊತೆಗೆ ಭಯವೂ ಕೂಡಾ..ಸಣ್ಣದಾಗಿ ಕಿರುಚುವುದರಲ್ಲಿದ್ದೆ..  ಅಷ್ಟರಲ್ಲಿ ಮಾಣಿ ಆವರಿಸಿದ ಮೌನ ಮುರಿದಂತೆ ಹೆದರಬೇಡಿ ಸಾರ್ ಈಗ ಕ್ಯಾಂಡಲ್ ತಂದೆ ಇರಿ.. ಯಾವ ದೆವ್ವವೂ ಬರಲ್ಲ ಕೂತ್ಕೊಳಿ ಅಂದ.. ಇದೇನು ನನ್ನತ್ರ ದೆವ್ವ ಅಂತ ಹೇಳ್ತಾನಲ್ಲ  ಎಂದು ನನಗೆ ನಾ‌ನೇ ಸಮಾಧಾನಪಟ್ಟುಕೊಂಡೆ.  ಐದು ನಿಮಿಷವಾದರೂ ಮಾಣಿಯ ಪತ್ತೆಯೇ ಇಲ್ಲ.ಕರೆಂಟೂ ಹೋದದ್ದು ಬರುವ ಹಾಗೆ ಕಾಣುತ್ತಿಲ್ಲ. ಸಣ್ಣದಾಗಿ ಮಿಂಚೊಂದಿಗೆ ಮಳೆ ಹನಿಯಲು ಶುರುವಿಟ್ಟಿತು. ಮತ್ತೆ ನನಗೆ ಗಾಬರಿಯಾಗಿ ಎದ್ದು ಹೊರಟುಬಿಡೋಣ ಅಂದುಕೊಂಡು ಅಲ್ಲಿಂದ ಎದ್ದು ಬಂದರೆ ಹೊರಗೆ ನಿಲ್ಲಿಸಿದ್ದ ಕಾರು ಇರಲಿಲ್ಲ. ಅಯ್ಯೋ ಶಿವನೆ ಎಂದೆ. ಕಾರನ್ನು ಕದ್ದು ಮಾಣಿ ಪರಾರಿಯಾದ ಎಂದಂದುಕೊಳ್ಳವಷ್ಟರಲ್ಲಿ ಹಿಂದೆ ತಿರುಗಿ ನೋಡಿದರೆ ಅಲ್ಲೀ ಢಾಬಾವೇ ಇರಲಿಲ್ಲ.. ! ತಲೆ ಮೇಲೆ  ಬೆರಳಿಟ್ಟು ನೆನಪಿಸಿಕೊಂಡೆ..
ನನ್ನ ಬಳಿ ಕಾರೂ ಇರಲಿಲ್ಲ. ನನಗೆ ಕಾರು ಚಲಾಯಿಸಲೂ ಬರುವುದಿಲ್ಲ ಎಂದು ಅರಿವಾಗುವುದೊರಳಗೆ ಚಾಕ್ಪೀಸ್ ಒಂದು ಹಣೆ ಮೇಲೆ ಬಡಿದಿತ್ತು ಹಾಗೂ ನನ್ನನ್ನೇ ದುರುಗುಟ್ಟು ನೋಡುತ್ತಿದ್ದ ಮೆತಮೆಟಿಕ್ಸ್ ಲೆಕ್ಚರಮ್ಮನ ಎರಡೂ ಕಣ್ಣು ಗುಡ್ಡೆಗಗಳೂ ಮುಖದಿಂತ ಹೊರಬಂದಿರುವಂತೆ ಕಂಡಿತು ಹಾಗೂ ಮೊದಲ ಬಾರಿಗೆ ದೆವ್ವಗಳು ನಿಜವಾಗಿಯೂ ಇರಬಹುದು ಎಂದನಿಸಿತು.
                                       
          ‌‌    ‌‌                     ೪.ನ್ಯೂಟನ್
         
      ಒಂದು ದಿನ ಹೀಗೇ ನನ್ನ  ಗೆಳೆಯನೊಂದಿಗೆ ಸಹಜ ಮಾತುಕತೆ ನಡೆಯುತ್ತಿತ್ತು. ಮಾತಿನ ಮಧ್ಯೆ ಏನೋ ವಿಷಯವಾಗಿ ನಾನವನಿಗೆ  ಹೇಳಿದೆ. 'ಮಾತಿನಲ್ಲಿನ ವಿಷಯ ಮುಖ್ಯವೇ ಹೊರತು ಆಡುವ ಭಾಷೆಯೋ,ವ್ಯಕ್ತಿಯೋ,ಅಥವಾ ಇನ್ಯಾವುದೋ ಅಲ್ಲ' . ಇದಕ್ಕಾತ ಯಾವುದೇ ಪೂರ್ವಾಪರಗಳಿಲ್ಲದೆ ಯಾವುದೇ ವಿಷಯವನ್ನೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾ ಅವನ ವಾದ ಮಂಡಿಸುತ್ತಿದ್ದ. ಇದಕ್ಕೇ ನಾನವನಿಗೊಂದು ಕತೆ ಹೇಳಿದೆ.
         ' ಒಮ್ಮೆ ಒಬ್ಬ ಹುಡುಗನಿಗೆ(ನನಗೇ ಅಂತಿಟ್ಟುಕೊಳ್ಳಿ) ನ್ಯೂಟನ್ ಕನಸಿನಲ್ಲಿ ಬಂದಿದ್ದನಂತೆ. ಅವನನ್ನು ಆ ಹುಡುಗ ಕೇಳಿದ 'ನೀನು ನಿಜವಾಗಿಯೂ ಸೇಬು ತಲೆಯ ಮೇಲೆ ಬಿದ್ದಾಗ ಗ್ರಾವಿಟಿಯ ಬಗ್ಗೆ ಸಂಶೋಧನೆ ಮಾಡಿದ್ದು ಹೌದಾ? ಎಂದು. ಅದಕ್ಕೆ ನ್ಯೂಟನ್ ನಾನು ಸಂಶೋಧನೆ ಮಾಡುತ್ತಾನೇ ಇದ್ದೆ ಆದ್ರೆ ಸೇಬು ತಲೆ ಮೇಲೆ ಬಿದ್ದಾಗ ನನಗೆ ಗುರುತ್ವದ ಅಸ್ತಿತ್ವ ಗೊತ್ತಾಯ್ತು ಅಂದ್ನಂತೆ.. ಆಗ ಆ ಹುಡುಗ 'ನಿನ್ನ ಹಾಗೇ ನಾನೂ ಸಂಶೋಧನೆ ಮಾಡ್ಬೇಕು ಅಂದ್ರೆ ಸೇಬು ತಲೆ ಮೇಲೆ ಬೀಳ್ಸ್ಕೊಳ್ಬೇಕಾ?'  ಅಂತ ಕೇಳಿದ.
ಅದಕ್ಕಾತ 'ಇಲ್ಲಾ! ನಾನು ಹೇಗೆ ಸಂಶೋಧನೆ ಮಾಡ್ದೆ ಅನ್ನೋದಕ್ಕಿಂತ
ಏನನ್ನು ಸಂಶೋಧನೆ ಮಾಡ್ದೆ ಅನ್ನುವುದರ ಬಗ್ಗೆ ಸ್ಟಡಿ ಮಾಡು' ಅಂತ ಹೇಳಿ ಹೋದನಂತೆ.  ಅದಕ್ಕೆ ಹೇಳೋದು ವಿಷಯ ಮುಖ್ಯ ಅದರ ಹಿನ್ನೆಲೆ ಅಲ್ಲವೆಂದು ನನ್ನ ಗೆಳೆಯನಿಗೆ ಹೇಳಿದೆ.
ಅವನಿಗೆ ಅರ್ಥ ಆಯಿತೋ ಇಲ್ಲವೋ ಗೊತ್ತಿಲ್ಲ ಆದರೆ ಅದಕ್ಕವನು ತಲೆಯಲ್ಲಾಡಿಸಿ ಕೇಳಿದ.. 'ನಿಜವಾಗ್ಲೂ ನ್ಯೂಟನ್ ಕನಸಿನಲ್ಲಿ ಬಂದಿದ್ನಾ ?' ಇದಕ್ಕೆ ನನ್ನ ನಾಲಿಗೆ ಹೊರಳದಂತಾಯಿತು.


                                 ೫.ಗರ್ವಭಂಗ
                                     
       ಮೈ ಉಜ್ಜುವ ಸಾಬೂನಿಗೆ ತನ್ನ ಘಮಿಸುವ ಸೌಗಂಧದ ಬಗ್ಗೆ ಚೂರು ಗರ್ವ.ಒಮ್ಮೆ ಅದಕ್ಕೆ ಬಚ್ಚಲಿನಲ್ಲಿ ತನ್ನದೇ ಸಾರ್ವಭೌಮತ್ವ ಸಾಧಿಸುವ ಯೋಚನೆ ಬಂದು ಬಟ್ಟೆ ಸಾಬೂನಿಗೆ  'ನಿನಗೇನು ಒಂಚೂರೂ ಸುವಾಸನೆ ಅನ್ನೋದೇ ಇಲ್ಲ. ಅದೇನು ಕೆಟ್ಟ ವಾಸನೆ.ಮನುಷ್ಯರು ಧರಿಸಿದ ಕೊಳಕು ಬಟ್ಟೆಯ ಮೇಲೆಲ್ಲ ಓಡಾಡಬೇಕು.ಒಂದು ವಾರದ ದುರ್ನಾತವನ್ನೆಲ್ಲ ನೀನು ನುಂಗಬೇಕು ಅಸಹ್ಯ.ನಾನಾದರೆ ನೋಡು ದಿನವೂ ಸ್ನಾನ ಮಾಡಿಸಿ ಮನುಷ್ಯರನ್ನು ಶುದ್ಧವಾಗಿಸಿಡುತ್ತೇನೆ.ಅವರ ಅಂಗಾಗಳ ಮೇಲೆಲ್ಲ ಓಡಾಡುವ ಅದೃಷ್ಟ' ಎನ್ನುತ್ತಾ ನಾಚಿಕೊಂಡಿತು. ಬಟ್ಟೆ ಸೋಪು ಏನೂ  ಹೇಳದೆ ನಕ್ಕು ಸುಮ್ಮನಾಯಿತು. ಸ್ನಾ‌ನ ಮಾಡಲು ಬಂದ ಸೋಪಿನ ಹಕ್ಕುದಾರ ಮನುಷ್ಯ ಮೈ ಸೋಪಿನಿಂದ ಮೈ ಉಜ್ಜಿಕೊಂಡು ಒಳ್ಳೆ ಸುವಾಸನೆ ಇದೆ ಎಂದು ಹೇಳಿದಾಗ ಮೈ ಸೋಪು ಅಲ್ಲೆ ಪಕ್ಕದಲ್ಲಿ ಒಗೆದು ಒಗೆದು ಸವಕಲಾಗಿ ಸಣ್ಣಗಾಗಿದ್ದ ಇನ್ನೇನು ಮುಗಿಯಿತೆನ್ನುವ ಆಯಸ್ಸಿನ ಬಟ್ಟೆ ಸೋಪಿನೆಡೆಗೆ ನೋಡುತ್ತಾ ಒಳಗೊಳಗೆ ನಗುತ್ತಿತ್ತು.
ಸ್ನಾನ ಮುಗಿಸಿ ಆತ ತನ್ನ ಒಳವಸ್ತ್ರವನ್ನು  ಕಳಚಿ  ಬಟ್ಟೆ ಸೋಪು ನೋಡಿದಾಗ ಅದು ಇನ್ನು ಮುಗಿಯಿತು ಕೈಗೆ ಸಿಗದಷ್ಟು ಸಣ್ಣಗಾಗಿದೆಯೆನ್ನುತ್ತಾ  ಒಳ್ಳೆ ಘಮಗುಡುವ  ಮೈ ಸೋಪನ್ನೆ ತನ್ನ ಒಳಚಡ್ಡಿಯ ಮೇಲೆಲ್ಲ ಹಚ್ಚಿದಾಗ ಮೈ ಸೋಪು ಮೂಗು ಬಾಯಿ ಎಲ್ಲ ಮುಚ್ಚಿಕೊಂಡು ತನ್ನನ್ನೇ ನಿರ್ಭಾವುಕನಾಗಿ ನೋಡುತ್ತಿದ್ದ ಬಟ್ಟೆ ಸೋಪಿನ ಕಡೆ ತಿರುಗಿ ತನ್ನ ಕರುಣಾಜನಕ ಸ್ಥಿತಿಯನ್ನು ತೋಡಿಕೊಳ್ಳುತ್ತಿತ್ತು. 

Tuesday, 17 March 2020

ಹುಡುಕಾ(ಗಾ)ಟ

ಪಿಸುಗುಟ್ಟು ಕೇಳುತ್ತಿದ್ದ ಸಂದೇಹಗಳನ್ನೆಲ್ಲ ನೆನೆಸಿಕೊಂಡು ಮೆಲುಕು ಹಾಕುತ್ತ ಕುಳಿತು ವರ್ಷ ಕಳೆಯುತ್ತ ಬಂತು. ಇಂದಿಗೂ  ನೀನು ಬಿಟ್ಟುಹೋದ  ಅಪೂರ್ಣ ಪ್ರಶ್ನಾವಳಿಗಳಿಗೆ ಉತ್ತರ ಹುಡುಕುತ್ತಲೇ ಇದ್ದೇನೆ. ಬೇಕಾದರೆ ಎದೆಗೂಡ ಮೇಲೆ ಕಿವಿ ಇಟ್ಟು ಕೇಳುವಿಯಂತೆ.. ಪ್ರಶ್ನೆಗಳು ಜೋರಾಗಿಯೇ ಡವಡವಿಸುತ್ತಿರುವ ದನಿ ಕೇಳಬಹುದು.
  ನಸುಕು ಹರಿಯುವುದರ ಯಾವ ಪರಿವೆಯೂ ಇಲ್ಲದಂತೆ ಹನ್ನೊಂದರ ತನಕ ಬಿದ್ದಿರುತ್ತಿದ್ದ ನನಗೆ ಅಂದೇನಾಯಿತು ಗೊತ್ತಿಲ್ಲ.
ಹಠಾತ್ತನೇ ಕತ್ತಲು ಆರುವುದರೊಳಗೇ ಎಚ್ಚರವಾಗಿ ಸದ್ದಿಲ್ಲದೇ
ಕದ ತೆಗೆದು ಮನೆಯ ಅಂಗಳ ದಾಟಿ ಹಾದಿ ಹಿಡಿದಿದ್ದೆ.
ಯಾವತ್ತೂ ಇಲ್ಲದ ಉಮೇದಿಯಲ್ಲಿ  ಓಡುತ್ತಾ ಊರ ದೇಗುಲದ ದ್ವಾರದ ಮುಂದೆ ನಿಂತು ಏದುಸಿರು ಬಿಡುತ್ತಿದ್ದೆ.
ರವಿ ಮಾಮ ಕೇಕೆ ಹಾಕುತ್ತಾ ಬೆಳಗು ಮಾಡುವ ಸದ್ದು ಭಟ್ಟರು ಅಭಿಷೇಕಕ್ಕೆ ಬಿಂದಿಗೆ ಗಡಗಡೆಯಿಂದ ಇಳಿಸುವ ಸದ್ದಿನೊಂದಿಗೆ ಕಲಸಿಹೋಗುತ್ತಿತ್ತು. ತಾಳಮೇಳಗಳಿಲ್ಲದ ದಿನಚರಿಯೊಂದಕ್ಕೆ ನಾಂದಿಯಾಗುವ ಸಂಭ್ರಮದಲ್ಲಿ ದೇಗುಲದ ಹಣತೆಯೊಂದು ಜೋರಾಗಿ ಉರಿಯುತ್ತಲಿತ್ತು.
    ಗಂಟೆ ಬಾರಿಸಿ ಕರಮುಗಿದು ಪ್ರದಕ್ಷಿಣೆ ಹಾಕಿ ಒಂದೆರಡು ನಿಮಿಷ ಧ್ಯಾನಿಸುತ್ತ ಕುಳಿತೆ‌. ಆಗಷ್ಟೇ ಬೆಳಗುಜಾವದ ಚಿಲಿಪಿಲಿಯ ಹಾಡು ಸುರುವಾಯಿತು.. ಕೌಸಲ್ಯ ಸುಪ್ರಜಾ ರಾಮಾ  ಪೂರ್ವಾ ಸಂಧ್ಯಾ ಪ್ರವರ್ತತೇ....
   
    ಪ್ರಶ್ನೆ ಬೆಳಗಿನಲ್ಲೇ ಹುಟ್ಟಿದೆಯೆಂದರೆ ಇಂದೇನೋ ವಿಶೇಷವೋ ಅಥವಾ ವಿಚಿತ್ರವೋ ಕಾದಿದೆಯೆನ್ನುವುದು ಪಕ್ಕಾ. ಧ್ಯಾನ ನಿರತನಾಗ ಪರ್ಯತ್ನದಲ್ಲಿದ್ದವನಿಗೆ ಮನಸ್ಸನ್ನು ಕೇಂದ್ರೀಕರಿಸಲಶಕ್ತನಾಗಿ ಸಂಶಯ,ಸಂದೇಹಗಳ ಜಡಿಮಳೆ ಸುರಿದಂತಾಗಿ ಎದ್ದು ಹೊರಬಂದೆ. ಅಂಥ ತಲೆಕೆಳಗಾಗಿಸುವ ಯೋಚನೆಗಳು ಹುಟ್ಟಿದ್ದೆಲ್ಲಿಂದ,ಪ್ರಶ್ನೆಗಳು ಮೂಡಿದ್ದೆಲ್ಲಿಂದ ಮತ್ತು ಅದಕ್ಕೊಂದಷ್ಟು‌ ಸಿದ್ಧ ಉತ್ತರಗಳಿಗಾಗಿ ತಡಕಾಡುವ ಗೋಜು ಅಂಟಿಕೊಂಡದ್ದೆಲ್ಲಿಂದ??

     ನಿಜವಾಗಿಯೂ ಆತ ಮೂರ್ತನಾಗಿರದಿದ್ದರೆ ಇಂದಿಗೆ ಇಂಥ ಪ್ರಶ್ನಾವಳಿಗಳೆಲ್ಲ ಅರ್ಥ ಕಳೆದುಕೊಂಡಿರುತ್ತಿದ್ದುವು. ಸಾದ್ಯವಾದಷ್ಟು ಅವನು ನಮ್ಮಿಂದ ಅಂತರ ಕಾಯ್ದುಕೊಳ್ಳುವುದು ಬದುಕಿನ ಅಲೆಮಾರಿ ಪ್ರಸಂಗಗಳಿಗೆ ತುಸು ರೋಚಕತೆಯನ್ನಿಡುವುದಕ್ಕೇ ಇರಬೇಕು. ಹುಡುಕಿ ಹೊರಟರೆ ದೇವರೇ ಸಿಗ್ತಾನಂತೆ ಅಂತ ಕನವರಿಸುತ್ತ ಎದ್ದು ಬಂದ ಘಳಿಗೆ ಇವೆಲ್ಲದರ ಜ್ಞಾನೋದಯವಾಗದಿದ್ದದ್ದಕ್ಕೂ ಹಲವು ಕಾರಣಗಳಿರಬಹುದು.
ತಾನಾಯಿತು ತನ್ನ ಪಾಡಾಯಿತು ಎಂದು ದಿನದೂಡುವ ಮಾಮೂಲಿ
ಕ್ರಿಯಾವಳಿಗಳಿಗಿಂತ ಇಂದು ಏನದೋ ವಿಭಿನ್ನವಾದದ್ದನ್ನು ಹುಡುಕುವ,ನಡೆಸುವ ಹೊಸ ಕ್ಷಣಗಳು ಸೂರ್ಯಪ್ರಭೆಯೊಂದಿಗೆ ಪೂರ್ವದ ತಪ್ಪಲಿನಿಂದ ನುಸುಳಿ ಬರತೊಡಗಿದ್ದವು.

ಧರ್ಮವನ್ನು,ದೇವರನ್ನು ಪ್ರಶ್ನಿಸಿ ಸವಾಲೊಡ್ಡುವ
ಕ್ರಿಯೆಯಲ್ಲಿ ಸಣ್ಣ ಅಚಾತುರ್ಯವಾದರೂ ಅದು ಮತ್ತೆ ಎದ್ದೇಳದಂತೆ ಘಾಸಿಗೊಳಿಸಿಬಿಡುತ್ತದೆ. ಹಾಗೆಂದು ಅದೇ ಪ್ರಶ್ನೆಗಳು ಏಕಾಂತದಲ್ಲಿ ಎಲ್ಲರಿಗೂ ಬಂದಿರಲೂಬಹುದು. ಆದರೆ ನಂಬಿಕೆಯ ಜೊತೆಗಿನ ಆಟದಲ್ಲಿ ಕೈ ಸುಟ್ಟುಕೊಳ್ಳುವ ಉಸಾಬರಿ ನನಗೆ ಬೇಡವೆಂದು ಬಿಟ್ಟದ್ದೇ ಹೆಚ್ಚು. ತಾಪತ್ರಯ ಯಾರಿಗಿಲ್ಲ ಹೇಳಿ.?
ಎಲ್ಲದಕ್ಕೂ ಶನೇಶ್ವರನೇ ಹೊಣೆ ಎನ್ನುತ್ತಾ ದೇವರ ಆಟ ಬಲ್ಲವರಾರು ? ಎಂದು ಹಾಡಿಕೊಳ್ಳುತ್ತಾ ಕಾಲ ಕಳೆಯುವುದಕ್ಕಿಂತ
ದೇವರನ್ನು ಹುಡುಕುತ್ತಾ,ಕಾಯುತ್ತಾ,ಅಲೆಯುತ್ತ,ಪ್ರಶ್ನಿಸುತ್ತ, ಉತ್ತರಿಸುತ್ತ ಕಾರ್ಯಾನುರಕ್ತನಾಗಿರುವುದು ಎಷ್ಟೋ ಮಿಗಿಲೆಂದೆನಿಸಿತು. ಅಂದು ಆದದ್ದೂ ಅದೇ ಇರಬಹುದು‌.
ಗುಡಿಯೊಳಗೆ ದೇವರಿದ್ದಾನೋ ಇಲ್ಲವೋ.. ದೇವರ ಸೃಷ್ಟಿ ಈ ಜಗತ್ತೆಂದು ಹೇಳುತ್ತಲೇ ಮನುಷ್ಯ ದೇವರನ್ನು ಸೃಷ್ಟಿಸಿದನೋ ಅಥವಾ‌  ಬರೀ ಕಲ್ಪನೆಗಳ ಆಚರಣೆಗಳೊಂದಿಗೆ‌‌ ನಂಬಿಕೆಗಳು ಸೃಷ್ಟಿಯಾದುವೋ..?
ಹೀಗೇ ಜಟಿಲ ಪ್ರಶ್ನಾವಳಿಗಳು ನಿರಂತರವಾಗಿ ಬಾಧಿಸುತ್ತಿದ್ದುವು.

ದೇಗುಲದಿಂದ ಎದ್ದು ಬಂದವನಿಗೆ ಮನಸ್ಸು ಏನನ್ನೂ ಮಾಡಲು ಹುರುಪು ನೀಡದಂತಾಗಿತ್ತು. ಸೀದಾ ಸಮೀಪದಲ್ಲೇ ಇದ್ದ ಹೊಳೆಯೊಂದರ ಬಳಿ ಹೋಗಿ ದಂಡೆಯ ಮೇಲೆ‌ ಭದ್ರವಾಗಿ ನೆಲೆನಿಂತಿದ್ದ ಕಲ್ಲುಬಂಡೆಯ ಮೇಲೇರಿ ಕುಳಿತು ಸ್ವಚ್ಛಂದವಾಗಿ ಹರಿಯುತ್ತಿದ್ದ ನೀರನ್ನೇ ತದೇಕಚಿತ್ತದಿಂದ ನೋಡುತ್ತಾ ಕುಳಿತೆ.
ಆಳದಲ್ಲಿ‌ ಪುಟ್ಟಪುಟ್ಟ ಮೀನುಗಳು,ಕಪ್ಪೆಗಳು,ನೀರ ಹುಳಗಳು ಬೆಳಗಿನ ಆಹ್ಲಾದವನ್ನು ಆಕಡೆಯಿಂದ ಈ ಕಡೆಗೆ ಅಡ್ಡಾಡುತ್ತ ತಮ್ಮ ಕಾರ್ಯಾಲಾಪಗಳಲ್ಲಿ ತೊಡಗಿಕೊಂಡು ಅನುಭಾವಿಸುತ್ತಿದ್ದುವು.
ಪ್ರಶಾಂತ ಹಸಿರು ವಾತಾವರಣದ ಸ್ವಚ್ಛಂದ ಗಿಡಮರಗಳು, ಗದ್ದೆಯ ವಿಶಾಲ ಬಯಲಲ್ಲಿ ಏಕತಾನತೆಯಿಂದ ಬೆಳೆದಿದ್ದ ಭತ್ತದ ಪೈರುಗಳು,
ಸುಯ್ಯನೆ ಬೀಸುವ ಗಾಳಿಗೆ ವಾಲಾಡುವ ಎತ್ತೆತ್ತರದ ಅಡಿಕೆ, ತೆಂಗಿನ‌ಮರಗಳ ಆ ನಾಟ್ಯ ಅಂದು ರಮಣೀಯವೆನಿಸಲು ಕಾರಣಗಳಿದ್ದಿರಬಹುದು. ಉಯ್ಯಾಲೆಯಾಡುತ್ತಿದ್ದ ಮನಸ್ಸು ಈಗ ಕೊಂಚ ಹದಕ್ಕೆ ಬರುತ್ತಿದ್ದದ್ದು ಗ್ರಾಸವಾಗುತ್ತಿತ್ತು. ಈ ಭೂಮಿಯ ಅಪ್ಯಾಯಮಾನವಾದ ಸೃಷ್ಟಿಗೆ, ಜೀವಜಂತುಗಳ ಬದುಕಿಗೆಲ್ಲ ನೆಲೆ ಕಲ್ಪಸಿ ;ಚರಾಚರಗಳ ಅಸ್ತಿತ್ವಕ್ಕೆ‌ ಹೋರಾಟದ ಪಂದ್ಯವೊಂದನ್ನು ನೀಡಿ ಸೋಜಿಗವನ್ನು ನೋಡುವ ಶಕ್ತಿಯೊಂದಿರಲೇಬೇಕು ಎಂದನಿಸಿತು. ಅದೇ ಆ ಶಕ್ತಿ ದೇವರೆಂದು ಕರೆದಿರಬಹುದು. ಅಲ್ಲವಾದಲ್ಲಿ‌ ಅಲ್ಲಲ್ಲಿ ಘಟಿಸಿದ,ಕೇಳಿದ,ನೋಡಿದ ಪವಾಡಸದೃಶ ಘಟನೆಗಳಿಗೆಲ್ಲ ತಾರ್ಕಿಕವಾದ ಕಾರಣಗಳ್ಯಾವುದೂ ಸಿಗದಿದ್ದರ ಉದಾಹರಣೆಗಳು ಎಷ್ಟು ಬೇಕು??

ಸುಮ್ಮನೆ ಕುಳಿತವನಿಗೆ ಶಾಂತವಾದ ನೀರು ಕದಡುವ ಕೆಲಸ ಸಿಕ್ಕಿತು. ಒಂದು  ಕಲ್ಲನ್ನು ಎತ್ತಿ ಆ ಹೊಳೆಯ ನೀರಿಗೆ ಎಸೆದೆ. ಅಷ್ಟೇ.. ನೀರು ಕದಡಿದ ರಭಸಕ್ಕೆ ಮೀನುಮರಿಗಳು,ಕಪ್ಪೆ-ಹುಳುಗಳೆಲ್ಲ ದೂರಸರಿದುವು. ಕೆಳಗಿದ್ದ ಮಣ್ಣು ಕದಡಿ ಸ್ವಲ್ಪ ನೀರು ಕೆಂಬಣ್ಣಕ್ಕೆ ತಿರುಗಿತು. ಮತ್ತೆ ಸ್ವಲ್ಪ ಹೊತ್ತಿಗೆ  ಶಾಂತವಾಗಿ‌ ನೀರು ತಿಳಿಯಾಗುತ್ತ ಸಹಜತೆಗೆ ಮರಳಿತು. ನೀ ಕೇಳಿದ ಹಳೆಯ ಪ್ರಶ್ನೆಗಳು ಈಗ ಚಿರಂತನವಾಗಿ ಕಾಡುವುದಿದೆ.. ನಡುರಾತ್ರಿ ಎದ್ದು ಯೋಚಿಸುವ ಖಯಾಲಿಯನ್ನು ಈಗ ಕಮ್ಮಿ ಮಾಡಿದ್ದೇನೆ. ದುಗುಡಗಳು ಕ್ಷೋಭೆಗೆ,ವಿಪ್ಲವಕ್ಕೆ ದಾರಿ ಮಾಡಿಕೊಟ್ಟಿತು ಎಂಬ ಕಾರಣಕ್ಕೆ ಆಡಿಸಿದಾತ ಬೇಸರಮೂಡಿ ಆಟ ಮುಗಿಸಿದ... ಎಂದು ಗುನುಗುತ್ತಾ ಸುಮ್ಮನಾಗುತ್ತೇನೆ.

ಸದ್ಯದ ಬರ್ಯಾಣ

DEJA-VU

ಕಾನೂರಿನಲ್ಲಿ ಇಂತಾ ಫಟಿಂಗರ ಸಂಖ್ಯೆ ತುಂಬಾ ಏನಿಲ್ಲ‌. ವೆಂಕಣ್ಣ ಅಂತ ಮಹಾಫಟಿಂಗರ ಸಾಲಿಗಂತೂ ಸೇರಿಸೋದಕ್ಕೆ ಲಾಯಕ್ಕಿಲ್ಲ. ಅವನ ಕರಾಮತ್ತು ಹೇಳಿಕೊಳ್ಳುವಂತ ಘನಾಂದಾರಿದು ಅ...

ಟಾಪ್ ಓದಾಣ