ಕಣ್ಣಾಯಿಸಿದವರು

Sunday, 16 February 2020

ಫಿಲಿಪ್ಸ್ ರೇಡಿಯೋ

ರಾಮನಾಥ ವಯಸ್ಸಾದಂತೆ ತುಂಬಾನೇ ಸಣಕಲಾಗಿದ್ದ. ಈಗೀಗ ಏನೇನೋ ಕಲ್ಪನೆ ಮಾಡುತ್ತ ಎಷ್ಟೊತ್ತಿಗೋ ಊಟ ತಿಂಡಿ ಸೇವಿಸುವುದು, ಕಡಿಮೆ ನಿದ್ರೆ ಮಾಡುವುದು , ಹಳೇ ಇಲೆಕ್ಟ್ರಾನಿಕ್
ಉಪಕರಣಗಳ ಕಳಚುವುದು, ನಡುರಾತ್ರಿವರೆಗೆ ದೂರದರ್ಶನದ ಧಾರಾವಾಹಿಗಳಲ್ಲಿ ಮುಳುಗುವುದು ವಿಚಿತ್ರ ವರ್ತನೆಗಳನ್ನೆಲ್ಲ ಶುರುವಿಟ್ಟುಕೊಂಡಿದ್ದ. ಇದರೊಂದಿಗೆ ಹಳೇ ಮುರುಕು ಟೇಪ್ ರೆಕಾರ್ಡರ್ ಚಟ ಹೊಸದಾಗಿ ಹುಟ್ಟುಕೊಂಡಿತ್ತು.  ಕೀರ್ತನೆ, ಯಕ್ಷಗಾನ, ತಾಳಮದ್ದಳೆ, ಪ್ರವಚನ, ಭಾವಗೀತೆ, ಸಿನಿಮಾ ಹಾಡುಗಳನ್ನು ಕೇಳುತ್ತಾ ಬೆಳೆದ ಅವನಿಗೆ ಟೀವಿ ಹೊಸತರಲ್ಲಿದ್ದ ಮಜ ಈಗ ಸಿಗುತ್ತಿರಲಿಲ್ಲ. ಆಧುನಿಕ ಧಾರಾವಾಹಿಗಳು, ರಿಯಾಲಿಟಿ ಶೋಗಳು, ಚಿತ್ರ ವಿಚಿತ್ರ ಕಾರ್ಯಕ್ರಮಗಳು ರಾಮನಾಥನಿಗೆ ಒಗ್ಗಲೇ ಇಲ್ಲ.ಅದಕ್ಕೇ ಅವನು ನೋಡುತ್ತಿದ್ದುದು ದೂರದರ್ಶನ ಚಂದನ, ಭಾರತಿಯ ಕೆಲವು ಕಾರ್ಯಕ್ರಮಗಳನ್ನು ಹೊರತುಪಡಿಸಿ ಟೀವಿಯಲ್ಲೇ ರೇಡಿಯೋ ಕೇಳುತ್ತಿದ್ದ. ತಿಂಗಳು ತಿಂಗಳು ದುಡ್ಡು ತುಂಬುವುದನ್ನೂ ನಿಲ್ಲಿಸಿ ಉಚಿತ ಚಾನಲ್ ಗಳಲ್ಲಿಯೇ ಕಾಲ ಕಳೆಯುವುದನ್ನು ರೂಢಿಸಿಕೊಂಡುಬಿಟ್ಟ. ಆದರೆ  ತನ್ನ ಇನ್ನೂ ಮೂರು ಮಕ್ಕಳ ಮನೆಯಲ್ಲಿ ಆರು ತಿಂಗಳ ಸಮಯ ಕಳೆಯುತ್ತಿದ್ದ ಅಬ್ಬೆಗೆ ಧಾರಾವಾಹಿಗಳು ಬಿಟ್ಟಿರಲಾರಾದಷ್ಟು ಅಚ್ಚೊತ್ತಿಕೊಂಡಿದ್ದವು. ಮನೆಯಲ್ಲಿದ್ದಾಗೆಲ್ಲ  ಸಂಜೆ ಕಳೆಯಲು ಏನಾದರೂ ಬೇಕಲ್ಲ ಎಂದು ರೂಢಿಸಿಕೊಂಡಿದ್ದ ಧಾರಾವಾಹಿಗಳು ಈಗ ಇಲ್ಲದಿದ್ದರೆ ಆಗದಂತಾಗಿತ್ತು. ಮಗನ ಹತ್ರ ದಿನಾ  ಕರಕರೆ ಮಾಡಿ ಕೊನೆಗೂ ದುಡ್ಡು ತುಂಬುವ ಟೀವಿ ಹಾಕಿಸಬೇಕೆಂದು ಹಠ ಹಿಡಿದುಬಿಟ್ಟಳು.

  ಹೀಗಿದ್ದಾಗ ಆಗಿದ್ದಾಗಲಿ ಎಂದು ಏರ್ಟೆಲ್ ಕಂಪನಿಯ ಸೆಟ್ ಆಫ್ ಬಾಕ್ಸ್ ಹಾಕಿಸಿದರು. ಮೊದಮೊದಲೆಲ್ಲ ಈ ಟೀವಿಯ ಒಂದಾದ ಮೇಲೊಂದು ಧಾರಾವಾಹಿಗಳನ್ನು ಭಾರೀ ಉಮೇದಿಯಲ್ಲಿ ನೋಡುತ್ತಿದ್ದವರು ನಿಧಾನಕ್ಕೆ ಮಳೆಗಾಲ ಶುರುವಾದಾಗ ಕರೆಂಟ್ ಇಲ್ಲದೇ ಪೇಚಾಡುತ್ತಿದ್ದರು. ಮಳೆಗಾಲದ ಕರೆಂಟು ನಂಬಿಕೊಂಡು ಟೀವಿ ನೋಡುತ್ತ ಕೂತರೆ ಆಗುದಿಲ್ಲ ಅಂತ ನಿಧಾನಕ್ಕೆ ಟೀವಿಯಿಂದ ವಿಮುಕ್ತರಾಗುತ್ತಿದ್ದರು. ರಾಮನಾಥ ಈಗ ವಾರ್ತೆ ಕೇಳುವುದನ್ನು ರೂಢಿಸಿಕೊಂಡದ್ದರಿಂದ ತಾಸಿಗೊಮ್ಮೆ ಟೀವಿ ಹಚ್ಚಿ ವಾರ್ತೆ ನೋಡುತ್ತಿದ್ದವನು ಮಳೆಗಾಲದಲ್ಲಿ ರೇಡಿಯೋ ಹುಡುಕುತ್ತಿದ್ದ. ಅಷ್ಟೊಂದು ಅನಿವಾರ್ಯ ಏನಿದೆ ಎಂದು ಕೇಳಿದರೆ "ಕೈಗಾ ಅಣು ಸ್ಥಾವರ ಇಲ್ಲೆ ಇದ್ದದ್ದು ಮಾರಾಯ.. ಬ್ಲಾಸ್ಟ್ ಆದ್ರೆ ಓಡೋಪ್ಲ್ ಬೇಕಾವ್ತು ಅದ್ಕೆ ತಾಸಿಗೊಂದ್ಸಲ ವಾರ್ತೆ ಕೇಳಕಾವ್ತು" ಅಂದು ಗೇಲಿ ಮಾಡುತ್ತಿದ್ದ‌ . ಈ ವಾರ್ತೆಯ ಗೀಳು ಎಷ್ಟು ಹತ್ತಿತ್ತೆಂದರೆ
ಆಕಾಶವಾಣಿಯಲ್ಲಿ ವಾರ್ತೆ ಓದುತ್ತಿದ್ದ ವ್ಯಕ್ತಿಯ ಧ್ವನಿಯನ್ನು ಮತ್ತೆಂದೋ ಯಾವುದೋ ಧಾರಾವಾಹಿಯಲ್ಲಿ ನಟನ ಧ್ವನಿ ಕೇಳಿ ಗುರುತಿಸುತ್ತಿದ್ದ. ಹೊಸಾ ಸೆಟ್ ಆಫ್ ಬಾಕ್ಸ್ ಹಾಕಿಸಿ ಅವನು ಪೇಚಿಗೆ ಸಿಲುಕಿದ್ದು ಏರ್ಟೆಲ್ ನಲ್ಲಿ ರೇಡಿಯೋ ಚಾನಲ್ ಗಳು ಬರುವುದಿಲ್ಲ ಎಂದು ಗೊತ್ತಾದಾಗ. ಆಗಿಂದಾಗ್ಗೆ ವಾಪಸ್ ಮಾಡಲು ಹೊರಟಿದ್ದ ಅವನನನ್ನು "ಇನ್ನು ಮುಂದೆ ಬರೋ ಯಾವ ಕಂಪನಿ ಡಿಷ್ ಅಲ್ಲೂ ರೇಡಿಯೋ ಕೊಡ್ತ್ವಿಲ್ಲೆ ಮಾರಾಯ ಇದ್ದದ್ರಲ್ಲಿ ಇದೇ ಚೊಲೋದಿದ್ದದ್ದು ಸದ್ಯಕ್ಕೆ " ಎಂದೆಲ್ಲಾ ಹೇಳಿ ಮಕ್ಕಳು ಸಮಾಧಾನ ಮಾಡಬೇಕಾಯ್ತು.

ಟೀವಿಯಲ್ಲಿ ಬರುವ ಮೂವತ್ತು ಮಗದೊಂದು ವಾರ್ತೆ ಚಾನಲ್ ಗಳನ್ನು ನೋಡುತ್ತ ರಾಮನಾಥ ಈಗೀಗ ಅಪಾರ ಜ್ಞಾನ ಸಂಪಾದಿಸುತ್ತಿದ್ದ. ವರ್ತಮಾನದ ಹಲವಾರು ವಿಷಯಗಳನ್ನು ತಿಳಿದುಕೊಂಡು ಸರ್ಕಾರದ, ಸಮಾಜದ ಆಗುಹೋಗುಗಳಿಗೆಲ್ಲ ತನ್ನದೊಂದು ಅಭಿಪ್ರಾಯ ಸಿದ್ಧಪಡಿಸಿಕೊಳ್ಳುವುದನ್ನು ಕಲಿತಿದ್ದ. ಯಾವುದೋ ವಿಷಯಕ್ಕೆ ಇನ್ಯಾವುದೋ ಮಹತ್ತರ ಉದಾಹರಣೆ ಕೊಟ್ಟು ಮರು ಮಾತಾಡದಂತೆ ತನ್ನ ಗೆಲುವಿಗೆ ಖುಷಿಪಡುತ್ತಿದ್ದ. ಶ್ರೀಲಂಕಾದಲ್ಲಾದ ಗುಂಡಿನ ದಾಳಿಗೂ ದೆಹಲಿಯಲ್ಲಿ ಅಳವಡಿಸುತ್ತಿರುವ ಸೀಸೀ ಟೀವಿಗೂ ಸಂಬಂಧ ಕಲ್ಪಿಸಿ ತನ್ನ ಮನೆ,ತೋಟ, ಬೆಟ್ಟ ಬೇಣದಲ್ಲೂ ಸೀಸಿ ಟೀವಿ ಹಾಕಿಸಬಹುದು, ಕೈಗಾ ಅಣು ಸ್ಥಾವರ ಸ್ಫೋಟ ಮಾಡಲು ಬರುವ ಭಯೋತ್ಪಾದಕರನ್ನು ಗುರುತಿಸಲು  ಕ್ಯಾಮಾರಾ ಅಳವಡಿಸಬಹುದು ಎಂದೆಲ್ಲ ಉಪಾಯಗಳನ್ನು ಸೂಚಿಸುತ್ತಿದ್ದ. ಊರಿನ ಸುತ್ತಮುತ್ತಲಿನ
ಕಾಡಿನಲ್ಲಿ ನಕ್ಸಲರ ಶಂಕೆಯಿದೆ ಎಂಬ ಸುದ್ದಿ ಯಾರಿಂದಲೋ ಕಿವಿಗೆ ಬಿದ್ದಿತ್ತು. ಅಂದಿನಿಂದ ಅವನ ಮಾತು ನಡೆಗಳಲ್ಲಿ ಯಾಕೋ ವ್ಯತ್ಯಾಸ ಕಂಡುಬರುತ್ತಿರುವುದು ಗಮನಕ್ಕೆಬರುತ್ತಿತ್ತು. ಟೀವಿಯಲ್ಲಿ
ಈಗೀಗ ಭಯೋತ್ಪಾದನೆ, ಕೋಮುಗಲಭೆ, ನಕ್ಸಲಿಸಂ,ಟೆರರಿಸ್ಟುಗಳು
ಇಂಥವುಗಳ ಚರ್ಚೆಗಳೇ ತಾರಕಕ್ಕೇರಿದ್ದು  ಅವನ ಮನಸ್ಸಿನ ಮೇಲೆ
ಪರಿಣಾಮ ಬೀರುತ್ತಿರುವುದು ಗೊತ್ತಾಗಿರಲಿಲ್ಲ. ದೈಹಿಕ ಕ್ಷೀಣತೆಯಿಂದಲೇ ಮಾನಸಿಕವಾಗಿ ಕುಬ್ಜವಾಗುತ್ತಿದ್ದಾನೆಯೋ  ಅಥವಾ ಮಾನಸಿಕ ತುಮುಲಗಳಿಂದಾಗಿ ದೈಹಿಕ ಅಶಕ್ತತೆಯುಂಟಾಗಿದೆಯೋ ಎಂಬುದನ್ನು ನಿರ್ಣಯಿಸಲು ಅವನಿಗೇ ಸಾಧ್ಯವಾಗುತ್ತಿರಲಿಲ್ಲ. ಆದರೆ ತನ್ನ ನಿಶ್ಯಕ್ತಿ,ನಿರಾಸಕ್ತಿ ಮತ್ತು ಜಿಗುಪ್ಸೆಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡದೇ ಇನ್ನಷ್ಟು ವ್ಯಾಧಿಗೆ ಹತ್ತಿರವಾಗುತ್ತಿದ್ದ. ಚೈತನ್ಯವನ್ನೇ ಕಳೆದುಕೊಂಡು ಬದುಕಿಗೆ
ತನ್ನ ಪಂದ್ಯವನ್ನು ಬಿಟ್ಟುಕೊಡುವ ಆಲೋಚನೆಯಲ್ಲಿದ್ದ ಅವನಿಗೆ
ತನ್ನ ಅತ್ತೆಯ ಸಾವು ಇನ್ನಷ್ಟು ಆಘಾತ ತಂದೊಡ್ಡಿತು. ಲೌಕಿಕ ಜಗತ್ತಿನ
ಆಡಂಬರಗಳೆಲ್ಲವೂ ರಾಮನಾಥನಿಗೆ ಈಗೀಗ ಎಲ್ಲ ಆಯಾಮಗಳಿಂದ ನಶ್ವರ ಎಂದೆನಿಸಿ ದುಃಖದ ಮಡಿಲಲ್ಲಿ ಹುದುಗಿಹೋಗಿದ್ದ. ಅಂತಃಕರಣದಿಂದ ಹೊರಬಂದ ದುಃಖದ ಬಾಷ್ಪ ಕಣ್ಣಂಚನ್ನು ಒದ್ದೆಮಾಡಿ ಕಪಾಲ ತೊಯ್ಯುವಷ್ಟು ಬಿಕ್ಕಿಬಿಕ್ಕಿ ಅತ್ತುಬಿಟ್ಟ. ಒಂದು ದಿನವಿಡೀ ಬಾತ್ರೂಮಿನಲ್ಲಿ ಹೊಕ್ಕು ಹೊರಬರಲೇ ಇಲ್ಲ.
 ಅವನಿಗೆ ತೀವ್ರ ಘಾತವಾದದ್ದು ಅರಿವಾಗಿ ಇನ್ನು ಯಾವುದೇ ಅನ್ಯ ಮಾರ್ಗವಿಲ್ಲದೇ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಕೇಳಿದ ಪ್ರಷ್ನೆಗಳಿಗೆಲ್ಲ ಉತ್ತರಿಸಿ ಒಂದು ವಾರ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿಕೊಳ್ಳಬೇಕಾಗಿ ಬಂತು. ಅವನ ಭಯ ಈಗ ಇನ್ನಷ್ಟು ಹೆಚ್ಚಾದ್ದಲ್ಲದೇ ಜೊತೆಗಿದ್ದವರಿಗೂ ತೊಂದರೆ ತಂದೊಡ್ಡಿತು.
ಮಕ್ಕಳಿಬ್ಬರೂ ಬಂದು ಅಪ್ಪನನ್ನು ನೋಡಿಕೊಳ್ಳುವುದರಲ್ಲಿ ಅವ್ಯಾಹತವಾಗಿ ನಿರತರಾದರು. ಮಕ್ಕಳ ಅನುಪಸ್ಥಿತಿಯಲ್ಲಿ ಇನ್ನಷ್ಟು ಗಾಬರಿಗೊಳ್ಳುತ್ತಿದ್ದ. ನಕ್ಸಲರು, ಭಯೋತ್ಪಾದಕರು ಎಂದೆಲ್ಲ ಕನವರಿಸಿ ನಿದ್ರೆಯಿಂದ ಎಚ್ಚರಗೊಂಡು ಭೀತನಾಗುತ್ತಿದ್ದ.
ಎರಡು ಮೂರು ದಿನಗಳಲ್ಲಿ ಮಾತ್ರೆಯ ಪರಿಣಾಮ ಸ್ವಲ್ಪವೇ ಚೇತರಿಕೆ ಕಂಡುಬಂದರೂ ಇನ್ನೂ ಒಬ್ಬನೇ ಇರಲು, ಬಾತ್ ರೂಮಿನ ಬಾಗಿಲು ಹಾಕಿಕೊಳ್ಳಲೂ  ಭಯವಾಗಿ  ನಡುಗುತ್ತಿದ್ದ.

ಜನರಲ್ ವಾರ್ಡಿನ ಬೆಡ್ ನಲ್ಲಿ ಮಲಗಿದ್ದ ರಾಮನಾಥನಿಗೆ ಬೇರೆ ಫೇಷಂಟ್ ಗಳನ್ನು ನೋಡಿ ಇನ್ನಷ್ಟು ಗಾಬರಿಯಾಗುತ್ತಿತ್ತು. ಜೊತೆಗೆ ಅವರೆಲ್ಲ
ತನ್ನನ್ನೇ ನೋಡುತ್ತಿದ್ದಾರೆ ಎಂದೋ ತನ್ನ ಮೇಲೆ ದಾಳಿ ಮಾಡುತ್ತಾರೆ ಎಂದೋ ಅನುಮಾನ ಮೂಡಿ ಮಕ್ಕಳಲ್ಲಿ ತೋಡಿಕೊಳ್ಳುತ್ತಿದ್ದ.
ಅಂತಹ ವಿಷಮ ಸ್ಥಿತಿಯಲ್ಲಿ ಮಕ್ಕಳಾದರೂ ಎಷ್ಟೆಂದು ಸಮಾಧಾನ ಮಾಡಿಯಾರು? ಇನ್ನಷ್ಟು ದಿನ ಹೀಗೇ ಕಳೆಯಬೇಕಾಗಬಹುದು ಎಂದು ಭಾವಿಸಿ ಚೇತರಿಕೆಯ ಲಕ್ಷಣಗಳಿಗೆ ತೃಪ್ತಿಗೊಳ್ಳುತ್ತಿದ್ದರು‌.

                                      ೨

ಮೆಹಬೂಬ್ ಸಾಬಿ

ರಾಮನಾಥನ ಪಕ್ಕದ ಬೆಡ್ ಗೆ ಮೆಹಬೂಬ್ ಸಾಬನ ಆಗಮನವಾಯಿತು.ಆತ  ಇಪ್ಪತ್ತೈದರ ಆಸುಪಾಸಿನ ಸದೃಢ ದೇಹದ ಯುವಕ. ಮೊದಲ ದಿನ ರಾಮನಾಥ ಅವನನ್ನು ನೋಡಿ ಮತ್ತಷ್ಟು ದಿಗಿಲುಗೊಂಡದ್ದು ಹೌದು. ಅಂದು ರಾತ್ರಿ ಅವನು ನಿದ್ರೆಯೂ ಮಾಡಲಿಲ್ಲ‌. ಮರುದಿನ ಬಿಪಿ ಚೆಕ್ ಅಪ್ ಮಾಡಿದಾಗ ತುಂಬಾ ಲೋ ಇದ್ದದ್ದರಿಂದ ವೈದ್ಯರು ಮತ್ತೆ ಪರೀಕ್ಷೆಗೆ ಕರೆದರು. ಅಂದಿನ ತಪಾಸಣೆಯಲ್ಲಿ  ಪಾಕಿಸ್ತಾನದ ಟೆರರಿಸ್ಟ್ ಬಂದಿದ್ದಾರೆ ನಮ್ಮನ್ನು ಕೊಲ್ಲುತ್ತಾರೆ ಮತಾಂತರ ಮಾಡುತ್ತಾರೆ ಎಂದು ಹಲುಬುತ್ತಿದ್ದ. ಯಾಕೆ ಹೀಗೆಲ್ಲ ಮಾತಾಡುತ್ತಿದ್ದಾನೆ ಎಂದು ಸ್ವಲ್ಪ ಹೊತ್ತಾದಮೇಲೆ ಗೊತ್ತಾಯಿತು.ಅಂದು ಮಾತ್ರೆ ಕೊಟ್ಟು ಮಲಗಿಸಿದರು. ಮರುದಿನ ಮೆಹಬೂಬ್ ಸಾಬಿಯೂ ಸ್ವಲ್ಪ ನಾರ್ಮಲ್ ಸ್ಥಿತಿಗೆ ಬಂದಿದ್ದ. ಪಕ್ಕದ ಬೆಡ್ ಪೇಷಂಟ್ ಆದ್ದರಿಂದ ಸಹಜವಾಗೇ ಪರಿಚಯವಾಗಿ ಮಾತುಕತೆ ಆರಂಭವಾಯಿತು. ಮೆಹಬೂಬ್ ಸಾಬಿ ಮೊಬೈಲ್ ನಲ್ಲಿ ಉತ್ತರ ಕರ್ನಾಟಕದ  ಹಾಡು ಹಚ್ಚುತ್ತಿದ್ದ. ಹಾಗೇ ರಾಮನಾಥನೂ ಅದನ್ನು ಕೇಳುತ್ತಾ ಭಾರೀ  ಜುಗಲ್ಬಂದಿ ಶುರುವಾಗಿತ್ತು. ಈ ನಡುವೆ ಮೆಹಬೂಬ್ ಸಾಬಿಯು ರಾಮನಾಥನಿಗೆ ಮೊಬೈಲ್ ಬಳಸಲು ಗೊತ್ತಾಗದ್ದರಿಂದ ರೇಡಿಯೋ ಕೊಳ್ಳುವ ಸಲಹೆ ನೀಡಿದ್ದು ಅವನನ್ನು  ಹೊಸಾ ಇಕ್ಕಟ್ಟಿಗೆ ಸಿಲುಕಿಹಾಕಿತ್ತು.

  ಮಗನಿಗೆ ಒಂದು ರೇಡಿಯೋ ತಂದು ಕೊಡಲು ಕಾಡಿ ಬೇಡಿ
ಕೊನೆಗೂ  ಹತ್ತಿರದಿಂದ ತಂದುಕೊಟ್ಟ ಯಾವುದೋ ಒಂದು ಹೊಸಾ ರೇಡಿಯೋ ಪಡೆದುಕೊಂಡ. ಈಗ ರಾಮನಾಥ ಖುಷಿಯಾಗಿ ರೇಡಿಯೋದೊಂದಿಗೆ ತನ್ನ ದಿನಚರಿ ಮುಗಿಸುತ್ತಿದ್ದ. ರೇಡಿಯೋದಲ್ಲಿ ಯಾವುದಾದರೂ ಬಲು ಮಜವಾದ ಹಾಡು ಬಂದರೆ ಮೆಹಬೂಬ್ ಸಾಬಿ ಹತ್ತಿರಕ್ಕೆ ಬಂದು ಸ್ಟೆಪ್ ಹಾಕುತ್ತಿದ್ದ.‌  ಅವನನ್ನು ನೋಡಿ  ರೇಡಿಯೋ ಆತನಿಗೇ ಕೊಟ್ಟು ಹಾಡು ಕೇಳಿಸುತ್ತಿದ್ದ. ಮೆಹಬೂಬ್ ಸಾಬಿ ಮತ್ತು ರಾಮನಾಥ ಈಗ ಭಾರೀ ದೋಸ್ತರಾದರು. ರಾಮನಾಥನಿಗೆ ಊಟ ತಂದುಕೊಡುವುದು, ಆಸ್ಪತ್ರೆಯಲ್ಲಿ ಕೊಡುವ ಹಾಲು ಬಾಳೆಹಣ್ಣಿನಲ್ಲಿ ಒಂದು ಹೆಚ್ಚೇ ಎತ್ತಿ ತಂದು ಕೊಡುವ ಮೆಹಬೂಬ್ ರಾಮನಾಥನ ಮಿಲಿಟರೀ ಟೋಪಿಯ ಕಡೆಗೆ ಭಾಳ ಆಕರ್ಷಿತನಾಗಿದ್ದ. ಟೋಪಿ ತೆಗೆದಿಟ್ಟಾಗಲೆಲ್ಲ ಎಲ್ಲಿಟ್ಟಿರೆಂದು ಕೇಳುವುದನ್ನು ನೋಡಿ ರಾಮನಾಥನೇ ಅವನಿಗೆ ಆ ಮಿಲಿಟರಿ ಟೋಪಿಯನ್ನು ಕೊಟ್ಟ. ಅದನ್ನು ಧರಿಸಿದ ಮೆಹಬೂಬ್ ಒಂದು ಸೆಲ್ಯೂಟ್ ಹೊಡೆದು ಜೈ ಹಿಂದ್ ಎಂದು ಮತ್ತೆ ಟೋಪಿ ಹಿಂದಿರುಗಿಸಿದ. ಒಂದೆರಡು ದಿನ ಹೀಗೇ ರೇಡಿಯೋ ಟೋಪಿ ವ್ಯವಹಾರ ಮಾಮೂಲಾಯಿತು. ರಾಮನಾಥ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವುದು ಕಂಡು ಮಕ್ಕಳಿಗೆ ಸಮಾಧಾನದ ಜೊತೆಗೆ  ನಿರಾಳವಾದಂತೆನಿಸಿತು.

ರೇಡಿಯೋದ ವಾರ್ತೆ, ಸಂಗೀತ ಕೇಳುತ್ತ ದಿನಕಳೆಯುತ್ತಿದ್ದ ರಾಮನಾಥ ಹೊಸಾ ಆಪಾದನೆ ಹೊರಿಸಿದ‌. ಈ ರೇಡಿಯೋದಲ್ಲಿ ಶ್ರೀಲಂಕಾ, ಪುಣೆಯ  ಬ್ಯಾಂಡ್ ಬರುವುದೇ ಇಲ್ಲ. ಫಿಲಿಪ್ಸ್ ರೇಡಿಯೋದಲ್ಲಿ ಚೆನ್ನಾಗಿ ಬರುತ್ತದೆ. ಇದನ್ನು ಬದಲಿಸಿ ಅದನ್ನು ಕೊಂಡುಬಾ ಎಂದು ದುಂಬಾಲು ಬಿದ್ದ‌. ಮಗ 'ಈಗೆಲ ಆ ಬ್ಯಾಂಡ್ ಎಲ್ಲ ಬತ್ಲೆ ಅಪಾ.. ಈಗಲ ಮೊಬೈಲ್ ಬಂದಾಗಿಂದ ರೇಡಿಯೋ ಕೇಳುದಲ ಬಿಟ್ಟಿದ್ವೋ..ಸುಮಾರ್ ಚಾನಲ್ ಎಲಾ ಬಂದ್ ಮಾಡಾಕಿದ್ದೊ ' ಎಂದು ಹೇಳಿ ಸಮಾಧಾನ ಮಾಡಿದ. ಅದಕ್ಕೆ ಮೆಹಬೂಬನೂ ಹ್ಞೂಂ ಎಂದು ಒಗ್ಗರಣೆ ಹಾಕಿದ. ಇಷ್ಟು ದಿನದಲ್ಲಿ ಮಾತ್ರೆ,ಆಸ್ಪತ್ರೆಯ ವಾತಾವರಣ, ಮೆಹಬೂಬನ ದೋಸ್ತಿ ರಾಮನಾಥನಿಗಿದ್ದ ದುಗುಡವನ್ನೂ ಏಕಾಂಗಿಭಾವವನ್ನೂ ಕಮ್ಮಿಯಾಗಿಸಿತ್ತು. 'ಆಸ್ಪತ್ರೆಯಲ್ಲಿ ನಾವೆಲ್ಲ ಮತ್ತೆ ಮನುಷ್ಯರಾಗುತ್ತೇವೆ' ಎಂದು ಮಗ ಗಟ್ಟಿಯಾಗಿ ತಾನು ಓದುತ್ತಿದ್ದ ಕತೆಯಲ್ಲಿನ ವಾಕ್ಯದೊಂದಿಗೆ ಸಣ್ಣದಾಗಿ ಕೆಮ್ಮಿದ.

ಇನ್ನೆರಡು ದಿನಕ್ಕೆ ಡಿಸ್ಚಾರ್ಜ್ ಮಾಡುಲಾಗುವುದೆಂದು ಹೇಳಿದಾಗ ರಾಮನಾಥ ಈ ರೇಡಿಯೋನೂ ಬೇಜಾರಾಗತೊಡಗಿ ಹೊಸ ಟೇಪ್ ರೆಕಾರ್ಡರ್ ತಂದರೆ ಭದ್ರಗಿರಿ ಅಚ್ಯುತದಾಸರ ಕೀರ್ತನೆ ಕೇಳಬಹುದೆಂದು ಆಸೆ ವ್ಯಕ್ತಪಡಿಸಿ ಮಗನಿಗೆ ಫಿಲಿಪ್ಸ್ ಕಂಪನಿಯದೇ ಟೇಪ್ ರೆಕಾರ್ಡರ್ ತಂದುಕೊಡಲು ಆರ್ಡರ್ ಮಾಡಿದ..

ಸದ್ಯದ ಬರ್ಯಾಣ

DEJA-VU

ಕಾನೂರಿನಲ್ಲಿ ಇಂತಾ ಫಟಿಂಗರ ಸಂಖ್ಯೆ ತುಂಬಾ ಏನಿಲ್ಲ‌. ವೆಂಕಣ್ಣ ಅಂತ ಮಹಾಫಟಿಂಗರ ಸಾಲಿಗಂತೂ ಸೇರಿಸೋದಕ್ಕೆ ಲಾಯಕ್ಕಿಲ್ಲ. ಅವನ ಕರಾಮತ್ತು ಹೇಳಿಕೊಳ್ಳುವಂತ ಘನಾಂದಾರಿದು ಅ...

ಟಾಪ್ ಓದಾಣ