"ನಿಂಗೊತ್ತಿದ್ದ ಇವತ್ತೆಂತೋ ಸ್ಪೆಷಲ್ ಇತ್ತು. ಸ್ಟೇಟಸ್ ನೋಡ್ದ್ಯ? ಪಾರ್ವಾಳ ಬಂದಿತ್ ಮನೆ ವಳ್ಗೆಯ "
ಗೊತ್ತಾತ್ ಇಂತ ಕೆಲ್ಸ ನಿನೇ ಮಾಡಂವ ಹೇಳ್ ನಂಗೊತ್ತಿದ್ದು..
ಎಲ್ಲಿಂದ್ ಎತ್ಕ ಬಂದೆ ಅಂತ ಹೇಳು ಅದ್ನ !!
ಇಲ್ಲಿಂದ ನಮ್ ಪಾರ್ವಾಳದ್ ಕತೆ ಶುರು ಆಯ್ತು.
೧
ಎಕ್ಸಾಮಿದೆ ಓದ್ಕೋಬೇಕು. ೨ ಗಂಟೆಗೆ ಅಂತಿರೋ ಟೈಮ್ ಟೇಬಲ್!
೧೨ ಗಂಟೆಗೇ ಎಕ್ಸಾಮ್ ಅಂತ ಗೊತ್ತಾಗಿ ಉಳ್ದಿರೋ ನಾಕ್ ಪ್ರೋಗ್ರಾಮ್ನ ಇನ್ನು ವಂದ್ ತಾಸಲ್ಲಿ ಕಲೀಬೇಕು ಅಂತ ಮನ್ಸಲ್ಲಿ ಲೆಕ್ಕಾಚಾರಾ ಹಾಕ್ತಾ ಓದ್ತಾ ಕೂತಿದ್ದೆ. ಕಿಟಕಿ ಬಾಗ್ಲು ಓಪನ್ ಇತ್ತು. ಒಳ್ಳೆ ಗಾಳಿ ಬೆಳ್ಕಿಗೇನೂ ಕೊರತೆ ಇಲ್ದಿರೋ ಮನೆ. ನಂಗೆ ತಿರ್ಗಾಡ್ತಾ ಓದೋದು ಅಭ್ಯಾಸ. ಬಾಗಿಲ ಹತ್ರ ಹೋಗ್ತಾ ಇದ್ದಂಗೇ ಸಡನ್ ಆಗಿ ಒಂದ್ ಕಾಗೆ ನಿಧಾನಕ್ ಮನೆ ಒಳಗೆ ಬರೋತರ ಕಾಣ್ಸ್ತಿತ್ತು. ಸರಿಯಾಗಿ ನೋಡಿದ್ಮೇಲೆ ಗೊತ್ತಾಗಿದ್ದು ಅದು ಕಾಗೆ ಅಲ್ಲ ಪಾರಿವಾಳ ಅಂತ. ಸರಿ ಬರ್ಲಿ ಒಳಗೆ ಫೋಟೋ ತೆಗ್ಯೋಣ ಅಂತ ಮೊಬೈಲ್ ಕ್ಯಾಮರಾ ತೆಗ್ದು ನಿಧಾನಕ್ಕೆ ಅಲುಗಾಡದಂಗೆ ನಿಂತ್ಕೊಂಡೆ. ಈ ಪಾರ್ವಾಳನೋ ಒಳ್ಳೆ ಕೋಳಿ ತರ ನಿಧಾನಕ್ ಕಾಳ್ ಹುಡ್ಕ್ತಾ ಒಳ್ಗ್ ಬರ್ತಿತ್ತು. ಬರ್ಲಿ ಬರ್ಲಿ ಬಂತು ಬಂತು..
ನೆಲಕ್ಕೊಂದ್ ಚಾಪೆ ಚಾಪೆ ಮೇಲ್ ಬುಕ್ಕು ಪಕ್ದಲ್ ನಾನು ಸ್ಟಾಚ್ಯೂ...
ಒಳ್ಗೆ ಬಂದ ಪಾರ್ವಾಳ ನಿಧಾನಕ್ಕೆ ಇನ್ನೂ ಒಳ್ಗೆ ಬಂತು. ನನ್ ಕಾಲ ಹತ್ತಿರವೇ ಬಂದು ಕುಕ್ಕುತ್ತಿತ್ತು . ಕಾಲ್ಬೆರಳ ಮೇಲೆ ಇನ್ನೇನು ಕುಕ್ಕುವುದರಲ್ಲಿತ್ತು ಅದರೊಳಗೆ ಕಾಲು ಎತ್ತಿ ಬಚಾವಾದೆ.
ಸ್ವಲ್ಪ ಹೆದರಿ ದೂರ ಓಡಿದ್ದು ಮತ್ತೆ ಹಿಂದೆ ನೋಡುತ್ತಾ ವಾಪಸ್ ಬರಲು ಶುರು ಮಾಡಿತು. ಇಲ್ಲಿಗೆ ಇದು ಹೋಗಲ್ಲ ಅಂತ ನಾನು ನಿಧಾನಕ್ಕೆ ಆಕಡೆಯಿಂದ ಹೋಗಿ ಡೋರ್ ಕ್ಲೋಸ್ ಮಾಡಿದೆ. ಈಗ ಅದಕ್ಕೆ ಹೊರಗೆ ಹೋಗುವ ದಾರಿಯೇ ಇಲ್ಲವಾದಂತಾಯಿತು.
ಅದಕ್ಕೆ ಹಳೇ ಹಿಂದಿ ಹಾಡು ನೆನಪಾಗಿರಲಿಕ್ಕೆ ಸಾಕು " ಹಮ್ ತುಮ್ ಎಕ್ ಕಮ್ರೇ ಮೇ ಬಂದ್ ಹೋ " 😌
ಅಲ್ಲೆ ಸ್ವಲ್ಪ ಓಡಾಡಿಕೊಳ್ಳುತ್ತಾ ಮನೆಯ ಒಳಾಂಗಣವನ್ನೆಲ್ಲಾ ಸರ್ವೇ ಮಾಡುತ್ತಾ ತಿರುಗಾಡುತ್ತಿತ್ತು. ಹಕ್ಕಿಯನ್ನು ಹಿಡಿಯೋಣವೆಂದು ಚಿಕ್ಕ ವಯಸ್ಸಿನಲ್ಲಿ ಮಾಡಿದ ಪ್ರಯತ್ನಗಳು ನೆನಪಾಗತೊಡಗಿತು.. ಆದರೆ ಇದುವರೆಗೂ ಒಂದು ಕೋಳಿಯನ್ನೂ ಹಿಡಿದಿಲ್ಲ ಎಂಬುದೂ ಅಷ್ಟೇ ಸತ್ಯ.😏
ಇಲ್ಲದ ಗಡಿಯಾರದಲ್ಲಿ ಮುಳ್ಳು ಜೋರಾಗೇ ತಿರುಗುತ್ತಿತ್ತು. ಇನ್ನು ಅರ್ಧಗಂಟೆ ಇದೆ .. ಬೇಗ ಇನ್ನೂ ಮೂರು ಪ್ರೊಗ್ರಾಮ್ ಕಲಿತರೆ ಒಂದು ಎಕ್ಸೆಪ್ಷನ್ ಅಂತ ಬಿಡಬಹುದು ಅಂತ ಮೆದುಳು ಮಿಂಚಿನಂತೆ ಉಪಾಯ ನೀಡಿತು. ಇಲ್ಲಿಗೆ ಬೇಗ ಬೇಗ ಓದ್ಬೇಕು ಅಂತ ಬುಕ್ ಎತ್ತಿ ಓದಲು ಶುರು ಮಾಡಿದರೆ ಪಾರ್ವಾಳ ನನ್ನ ಸುತ್ತಲೇ ಬಂದು ಹೋಗಿ ಬಂದು ಹೋಗಿ ಆಟವಿಡಲು ಶುರು ಮಾಡಿತ್ತು. ಒಂದೆರಡು ಸಾರಿ ನಾನೇ ಕೈ ನೀಡಿ ಆಟ ಆಡಿಸಿದೆ. ಆಮೇಲೆ ಹೋದ್ರೆ ಹೋಗ್ಲಿ ಅಂತ ಡೋರ್ ಓಪನ್ ಮಾಡಿದರೆ ಹೊರಗೆ ಹೋಗಿದ್ದು ಮತ್ತೆ ಒಳಗೇ ಬರಬೇಕೇ..?😕
ಇನ್ನು ಇದಕ್ಕೆ ಏನಾದರೂ ಮಾಡ್ಬೇಕು ಅಂತ ಅದನ್ನ ಎರಡೂ ಕೈನಲ್ಲಿ ಹಿಡಿದು ಎತ್ತಿಕೊಂಡು ತೊಡೆ ಮೇಲೆ ಕೂರಿಸಿ ನಿಧಾನವಾಗಿ ತಲೆ ನೇವರಿಸುತ್ತಾ ನನ್ನ ಪಾಡಿಗೆ ನಾನು ಓದುತ್ತಾ ಕುಳಿತುಕೊಂಡೆ.
ಸ್ವಲ್ಪ ಹೊತ್ತಿಗೆ ನನ್ನ ಭುಜದ ಮೇಲೆ ಚಂಗನೆ ನೆಗೆದು ಕುಳಿತುಕೊಂಡ ಅದನ್ನು ಫೋನ್ ತೆಗೆದು ಸೆಲ್ಫಿ ತೆಗೆದುಕೊಂಡೆ.
ವಾಟ್ಸಾಪ್ ಸ್ಟೇಟಸ್ಸೂ ಹಾಕಲಾಯಿತು.😎
ಹ್ಮ್ ಇಲ್ಲಿಗೆ ಮೂರು ಪ್ರೊಗ್ರಾಮ್ ಕಲಿತು ಹೊರಡಬೇಕು ಎಂದು ಎದ್ದು ಅಣಿಯಾಗಲು ರೂಮಿಗೆ ಹೋದೆ . ಪಾರ್ವಾಳ ನನ್ ಹಿಂದೆಯೇ ಪರ್ ಪರ್ ಅನ್ನುತ್ತಾ ಹಾರಿ ಬಂದು ಕಬೋರ್ಡಿನ ಮೇಲೆ ಬಂದು ಕೂತಿತು.ಆಕಡೆ ಈ ಕಡೆ ನೋಡುತ್ತಾ ಕುಳಿತಿದ್ದ ಅದಕ್ಕೆ ನಾನು ರೆಡಿಯಾಗಿ ಹೊರಗೆ ಹೋಗುತ್ತಿದ್ದೇನೆಂಬುದು ಹೇಗೆ ಗ್ರಾಹ್ಯವಾಯಿತು ಎಂಬುದು ಚಕಿತ. ನಾನು ಹೊರಗೆ ಕಾಲಿಟ್ಟು ಬಾಗಿಲು ಎಳೆದು ಇನ್ನೇನು ಲಾಕ್ ಮಾಡುವುದರೋಳಗೆ ಅದು ಹೊರಗೆ ಹಾರಿ ಬಂದಿತು. ನಾನೂ ಇನ್ನು ತಡವಾಗುತ್ತೆ ಅಂದು ಅದನ್ನು ಮನೆಯ ಹೊರಗೇ ಬಿಟ್ಟು ಡೋರ್ ಲಾಕ್ ಮಾಡಿ ಕಾಲೇಜಿಗೆ ಹೊರಟೆ...!🚶
ನಾ ಬರುವ ತನಕ ಮನೆಯೊಳಗೆ ಪಾರ್ವಾಳ ಹಿಕ್ಕೆ ಹಾಕಿದೆ ಅಂತ ನನ್ನ ರೂಮಿಯ ಕೋಪ ಇನ್ನೂ ಶಾಂತವಾಗಿರಲಿಲ್ಲ. ಆದರೆ ಅದು ಹೇಗೆ ಹಿಕ್ಕೆ ಹಾಕಿರಲು ಸಾಧ್ಯ ಅಂತ ನನಗೆ ಬಿಡಿಸಲಾಗದ ಪ್ರಶ್ನೆಯಂತಾಯಿತು. ನಾನದನ್ನು ಹೊರಗೆ ಬಿಟ್ಟು ಹೋಗಿದ್ದೇನೆ. ಮತ್ತೆ ಒಳಗೆ ಬಂದಿರಲು ಹೇಗೆ ಸಾಧ್ಯ ಎಂಬುದು ನನ್ನ ಪ್ರಶ್ನೆ. ನೇರವಾಗಿ ಅವನಿಗೇ ಕೇಳಿದೆ..?
ಅವ ನನ್ನ ಮಾತು ನಂಬಲು ಸ್ವಲ್ಪವೂ ತಯಾರಿರಲಿಲ್ಲ. ನಾನೇ ಬೇಕೆಂದು ಅದನ್ನು ಒಳಗೆ ಬಿಟ್ಟು ಹೋಗಿದ್ದೇನೆ ಅಂತ ಅವನ ವಾದ..
ಅವನು ಮನೆ ಒಳಗೆ ಬರುವ ಹೊತ್ತಿಗೆ ಅದು ಮೊದಲೇ ಒಳಗಿತ್ತು ಎಂಬ ಭ್ರಮೆಯಲ್ಲಿ ಅವನಿದ್ದನೋ ಅಥವಾ ಅದನ್ನು ಹೊರಗೆ ಕಳಿಸಿ ಬಾಗಿಲು ಹಾಕಿದೆ ಎಂಬ ಭ್ರಮೆಯಲ್ಲಿ ನಾನಿದ್ದೆನೋ ಎಂಬುದು ಇನ್ನೂ ಸಂಶಯಾಸ್ಪದ ವಿಷಯವಾಗೇ ಉಳಿದುಬಿಟ್ಟಿದೆ.
ಅವನೂ ಅದರೊಂದಿಗೆ ಸೆಲ್ಫಿ ತೆಗೆದುಕೊಂಡು ಒಂದೆರಡು ಬಾರಿ ಕುಕ್ಕಿಸಿಕೊಂಡಿದ್ದು ಮಾತ್ರ ಈಗ ಪಾರ್ವಾಳದ ಜೊತೆಗೇ ನೆನಪುಗಳಾಗಿ ಹಾರಿ ಹೊರಟಿತು. 😇
೨
ಕಬೂತರ್ ಜಾ ಜಾ ಜಾ ಕಬೂತರ್ ಜಾ !!
ಸಾಮಾನ್ಯವಾಗಿ ಹಕ್ಕಿಗಳು ತಾವಾಗಿಯೇ ಮನುಷ್ಯನ ಸಂಪರ್ಕ ಬೆಳೆಸುವುದು ವಿರಳ. ನಾವು ಅವುಗಳಿಗೆ ಕಾಳುಗಳನ್ನೋ, ಇನ್ನೇನೋ ಆಹರವನ್ನೋ ಒದಗಿಸಿ ನಮ್ಮೆಡೆಗೆ ಬರುವಂತೆ ಮಾಡಬೇಕಾಗುತ್ತದೆ. ಅವು ನಮ್ಮಿಂದ ಯಾವುದೇ ಅಪಾಯಗಳಿಲ್ಲವೆಂಬುದು ಖಚಿತವಾದಾಗ ಮಾತ್ರ ನಮ್ಮೊಂದಿಗೆ ಸ್ನೇಹ ಬೆಳೆಸುತ್ತದೆ. ಇದು ಕೇವಲ ಹಕ್ಕಿಗಳಿಗೆ ಮಾತ್ರವಲ್ಲ ಹಲವು ಪ್ರಾಣಿಗಳಲ್ಲಿಯೂ ಇರುವಂತಹ ಸಾಮಾನ್ಯ ಲಕ್ಷಣಗಳು. ತಮ್ಮ ಸುರಕ್ಷತೆಯ ಕಡೆಗೆ ಸದಾ ಜಾಗರೂಕತೆ ವಹಿಸುವುದು ಎಲ್ಲಾ ಜೀವಿಗಳಲ್ಲಿ ಅನುವಂಶಿಕವಾಗಿ ಬರುವಂತಹ ಸಾಮಾನ್ಯ ಗುಣ. 'ಸರ್ವೈವಲ್ ಆಫ್ ಫಿಟ್ಟೆಸ್ಟ್ ' ಥಿಯರಿಯಂತೆ ತಮ್ಮ ಉಳಿವಿಗಾಗಿ ಸದಾ ಹೋರಾಡಬೇಕಾದದ್ದು ಪ್ರತಿಯೊಂದು ಜೀವಿಗಳಿಗೆ ಮೂಲಭೂತ ನಿಯಮವೇ ಆಗಿದೆ. ಸಾಕು ಇನ್ನೂ ಕೊರೆದರೆ ನೀವು ಮುಂದೆ ಓದುವುದಿಲ್ಲ..
ಆಗಲೇ ಹೇಳಿದಂಗೆ ಅದು ನಮ್ಮ ಮನೆಯ ಒಳಗೆ ಬಂದದ್ದು ಹೊರಗೆ ಹೋಗಲು ಅವಕಾಶಗಳನ್ನು ಒದಗಿಸಿ ಕಳಿಸಿದರೂ ಹೋಗಲು ತಯಾರಿರಲಿಲ್ಲ. ಮನೆಯಲ್ಲಿ ಅಂತ ವಿಶೇಷ ಆಹಾರವ್ಯಾವುದೂ ಇರಲಿಲ್ಲ. ಬೇಳೆ ಕಾಳುಗಳನ್ನೆಲ್ಲ ತಂದಿಟ್ಟು ಅಡುಗೆ ಮಾಡುವುದೂ ತುಂಬಾ ಅಪರೂಪಕ್ಕೆ.. ಆದ್ದರಿಂದ ಬೇಕಾದಾಗ ತಂದುಕೊಳ್ಳುವುದು ರೂಢಿ. ಈ ಪಾರ್ವಾಳಕ್ಕೆ ಏನಾದರೂ ಹಾಕಬೇಕೆಂದು ಅಂದುಕೊಂಡರೂ ಏನೂ ಇರಲಿಲ್ಲ.
ನಾನು ಅದನ್ನು ಹೊರಬಿಟ್ಟು ಕಾಲೇಜಿಗೆ ಹೋಗಿದ್ದೇನೆಂಬ ನಂಬಿಕೆಯನ್ನೇ ಮುಂದುವರೆಸಿದರೆ ನನ್ನ ರೂಮಿ ತಾನು ಮನೆಗೆ ಬಂದು ಒಳಗೆ ಅದನ್ನು ಕಂಡು ಆಟವಾಡಿ ಅದಕ್ಕೆ ಸಕ್ಕರೆ ಕೊಟ್ಟನಂತೆ.. ಶಬ್ಭಾಷ್!! ಆತ ನಂಗಿಂತ ಬುದ್ವಂಥ ಅಂತ ಒಪ್ಪಿದ್ದಾಯಿತು. ಅದು ಸಕ್ಕರೆ ತಿಂದಿತೋ ಬಿಟ್ಟಿತೋ ಎಲ್ಲಾ ಅವನು ಹೇಳಿದ ಕತೆಯನ್ನೇ ನಂಬಿದೆ. ಅವನು ಹೇಳಿದ ಪ್ರಕಾರ ಅದು ಆಗಾಗ ಹಿಕ್ಕೆ ಹಾಕುತ್ತಿತ್ತು ಮತ್ತು ಅದು ಧೈರ್ಯವಾಗಿ ಮೈಮೇಲೆ ಬಂದು ಕುಳಿತುಕೊಳ್ಳುತ್ತಿತ್ತು.. ಇದನ್ನೆಲ್ಲಾ ಆತನ ನಾಲಿಗೆಯಿಂದಲೇ ಕೇಳಿ ನಾನು ಹೌದೆಂದು ಒಪ್ಪಿಕೊಂಡದ್ದಾಯಿತು.. ಆದರೆ ಆತ ಆ ಪಾರಿವಾಳವನ್ನು ಓಡಿಸಿದ್ದೇಕೆ ಎಂಬ ಪ್ರಶ್ನೆ ಮೂಡಿ ಕೇಳಿಯೇಬಿಟ್ಟೆ.
ಅದಕ್ಕಾತ ಹಿಕ್ಕೆ ಹಾಕಿದ್ದು ತನ್ನ ಬೆಡ್ ಷೀಟ್ ಮೇಲೆ ಅದನ್ನು ಓಡಿಸದೇ ಇಲ್ಲೇ ಬಿಡಲಾಗುತ್ತದೆಯೇ .? ನೀ ನನ್ನ ಬೆಡ್ ಷೀಟ್ ಕ್ಲೀನ್ ಮಾಡಿಕೊಡ್ತೀಯಾss ಎಂದುಬಿಟ್ಟ ಒಂದೇ ಉಸಿರಿಗೆ.
ಇದಕ್ಕೆ ನಾನು ಏನೂ ಉತ್ತರಕೊಡಲಾಗದೇ ನನ್ನ ಸ್ಟೇಟ್-ಮೆಂಟನ್ನು ವಾಪಸ್ ತೆಗೆದುಕೊಳ್ಳದೇ ಅನ್ಯ ಮಾರ್ಗವೇ ಇಲ್ಲದಾಯಿತು. 😔
೩
*ಸಾಕ್ಷಾತ್ಕಾರ*
ಡ್ರಾಮಾ ರಿಹರ್ಸಲ್ ಮುಗಿಸಿ ಮನೆಗೆ ಬರುವುದು ರಾತ್ರಿ ೯ ಗಂಟೆಯಾಗಿತ್ತು. ಊಟಕ್ಕೆ ಹೊರಗೆ ಹೋಗಿದ್ದ ನಿಚ್ಚಿಗೆ(ರೂಮಿ) ಫೋನಾಯಿಸಿದೆ. ಆದಷ್ಟು ಬೇಗ ಬಾ ಕೆಲಸವಿದೆ.. ಸಾಧ್ಯವಾದರೆ ನನಗೂ ಊಟ ಪಾರ್ಸಲ್ ಕಟ್ಟಿಕೊಂಡು ಬಾ ಎಂದು ಫೋನಲ್ಲಿ ಹೇಳಿದೆ.. ಆದರೆ ಎಂದೂ ಹೀಗೆ ಗಾಬರಿಯಿಂದ ಮಾತಾಡದವನು ಏಕಿಷ್ಟು ಗಡಿಬಿಡಿಯಿಂದ ಅರ್ಧಂಬರ್ಧ ಮಾತಾಡಿದೆ ಎಂದು ಆತ ಏನೋ ವಿಷಯವಿದೆಯೆಂದು ಊಹಿಸಿ ಹತ್ತು ನಿಮಿಷದಲ್ಲಿ ಮನೆಗೆ ತಲುಪಿದ್ದ. ಮನೆಯ ಹೊರಗಡೆ ದಿನವೂ ನಿಲ್ಲಿಸುತ್ತಿದ್ದ ಸೈಕಲ್ ಕಾಣದೇ ಬಂದವನೇ ಕೇಳಿದ್ದು ಸೈಕಲ್ ಎಲ್ಲಿ ಬಿಟ್ಬಂದೆ ಎಂದು !!
ಮತ್ತೆ ನಾನು ಅಲ್ಲೆ ಕುಳಿತುಕೊಂಡು ಮಂಡಿಗಾದ ಗಾಯ, ಮೊಣಕೈ ತರೆದು ಗಾಯವಾಗಿ ಮೆತ್ತಿದ್ದ ರಕ್ತ ತೋರಿಸುತ್ತಾ ಚಿಕ್ಕ ಆ್ಯಾಕ್ಸಿಡೆಂಟ್ ನ ಕತೆಗೆ ಉಪಕ್ರಮವಿಟ್ಟೆ.
ಬೇಗ ಹೋಗಿ ಡೆಟಾಲ್,ಬ್ಯಾಂಡೆಡ್ ತಗೋಬಾ ಎಂದು ಅವನನ್ನು ಕಳಿಸಿದೆ. ನಾನೇ ಹಾಸ್ಪಿಟಲ್ಗೆ ಹೋಗಿಬರುವುದು ಒಳ್ಳೆಯದು ಎಂದು ಒತ್ತಾಯಿಸಿದವನು ನಾನು ಪರ್ಸ್ ತೆಗೆದಾಗ
ಉಳಿದ ಒಂದೇ ನೂರು ರೂಪಾಯಿಯ ನೋಟು ನೋಡಿ ಸುಮ್ಮನಾದ. ಬೇಗ ಹೋಗಿ ಗಾಯಕ್ಕೆ ಔಷಧಿ ಮಾಡುವ ಸಲುವಾಗಿ
ಬ್ಯಾಂಡೇಜ್ ಹಾಗೂ ಆಯಿಂಟ್ ಮೆಂಟ್ ತಂದ. ನಿಧಾನವಾಗಿ ಹತ್ತಿಯಿಂದ ಗಾಯದ ಸುತ್ತಲೂ ರಕ್ತವನ್ನು ಒರೆಸುತ್ತಾ ಆಯಿಂಟ್ ಮೆಂಟ್ ಹಚ್ಚಿ ಬ್ಯಾಂಡೇಜ್ ಕಟ್ಟಿದ. ಬರೀ ಜಗಳ,ವಾದದಲ್ಲೆ ಸಮಯ ಕಳೆಯುತ್ತಿದ್ದ ನಮಗೆ ಇಂಥ ಸ್ಥಿತಿ ಇನ್ನೂ ಬಂದಿರಲಿಲ್ಲ. ನನಗೆ ಈಗ ಈತ ಮಹಾನ್ ವೈದ್ಯನಂತೆ ಕಾಣತೊಡಗಿದ. ರೂಮೇಟ್ಸ್ ಎಂಬುದರ ಅರ್ಥ ನನಗೀಗ ಸಾಕ್ಷಾತ್ಕಾರವಾಗತೊಡಗಿತು. ಇದುವರೆಗೂ ನಾನೂ ಯಾರಿಗೂ ಹೀಗೆ ಶುಶ್ರೂಷೆ ಮಾಡಿದವನಲ್ಲ ಎಲ್ಲೋ ನನ್ನ ಪರಿವಾರದವರ ಕೆಲವು ಸಂದರ್ಭಗಳನ್ನು ಹೊರತುಪಡಿಸಿ..
ಬ್ಯಾಂಡೇಜ್ ಸ್ವಲ್ಪ ಬಿಗಿಯಾಗಿ ಕಟ್ಟಿದ್ದರಿಂದ ಜೊತೆಗೆ ನೋವೂ ಸ್ವಲ್ಪ ಸ್ವಲ್ಪ ಜಾಸ್ತಿಯಾಗತೊಡಗಿದ್ದರಿಂದ ನನ್ನ ಕಾಲು ಮಡಚಲು ಆಗದ ಹಾಗಾಗಿತ್ತು . ಕಾಲು ಎಳೆಯುತ್ತಲೇ ಬಾತ್ರೂಮಿಗೆ ಹೋಗಿ ಬಂದೆ.
ನಿಧಾನಕ್ಕೆ ಕುಳಿತು ಊಟ ಮಾಡುತ್ತಿದ್ದಾಗ ಗಾಯ ಒರೆಸಿದ ಹತ್ತಿಯನ್ನು ಎಸೆದು ಡೆಟಾಲ್ ಚೆಲ್ಲಿದಲ್ಲಿ ಕ್ಲೀನ್ ಮಾಡಬೇಕು ಇಲ್ಲದಿದ್ದರೆ ನಂಜು ಹರಡುತ್ತದೆ ಎಂದು ಅವನು ಉಸುರಿದ.
ನೀನ್ ನನ್ ಕಾಲ್ ಮ್ಯಾಲ್ ಉಳ್ಕೋ ಬೇಡ್ವೇ ನಂಜು
ಚೂರೂ ದುಡ್ಡೇ ಇಲ್ಲೆ ನನ್ನತ್ರ ಪರ್ಸೂ ಖಾಲಿಯಾಗ್ತಾ ಬಂಜು..
ನಂಜು ಅನ್ನು ಪದ ಕೇಳಿದಕೂಡಲೇ ನನಗೆ ಮತ್ತೆ ಪಾರ್ವಾಳದ ನೆನಪಾಯಿತು. ಸುಮಾರು ರೋಗಗಳೆಲ್ಲ ಇಂತಹ ಪ್ರಾಣಿಪಕ್ಷಿಗಳಿಂದ ಹರಡುತ್ತದೆ ಎಂಬ ಎಂಟನೇ ತರಗತಿಯ ಸಾಂಕ್ರಾಮಿಕ ರೋಗಗಳು
ಚಾಪ್ಟರ್ ಕಣ್ಮುಂದೆ ಬಂದು ಹೋಯಿತು. ಅವನತ್ರ ಹೇಳಿದೆ ನೀ ಹೇಳಿದ್ದು ಸರಿ ಹೀಗೆ ಹಕ್ಕಿ ಗುಬ್ಬಿಯಲ ಮನೆ ಒಳಗೆ ಬಿಡಬಾರದು. ಅವುಗಳಿಗೆ ಯಾವ್ದಾದ್ರೂ ರೋಗಗಳೆಲ್ಲ ಇದ್ರೆ ನಮ್ಗ್ ಹರ್ಡ್ತು ಅಂದೆ.
ಅಷ್ಟೇ ಅವನು ಆ ಪಾರ್ವಾಳದ ಮೇಲಿದ್ದ ತನ್ನ ಮುನಿಸಿಗೆ ಬಲ ಬಂದಂತೆ ಖುಷಿಯಾಗಿಬಿಟ್ಟ. ನಮ್ಮ ದೈನಂದಿನ ವಾದ ಪ್ರತಿವಾದಗಳಂತೆ ಇದಕ್ಕೂ ಒಂದು ಬಲವಾದ ಪ್ವಾಯಿಂಟ್ ಸಿಕ್ಕಿದಂತೆ ಮುಂದುವರೆಸಿದ. ತಾನು ನೋಡಿದ ಹಾಗೆ ಪಾರ್ವಾಳ ಜಾಸ್ತಿ ಹಾರ್ತಾ ಇರ್ಲಿಲ್ಲ. ಅದಕ್ಕೆ ಏನೋ ರೋಗ ಬಂದಿದ್ದಂತೂ ಸತ್ಯ.
ಇಲ್ಲದಿದ್ದರೆ ಅದು ಒಳಗೆ ಬರ್ತಾ ಇರ್ಲಿಲ್ಲ ಮತ್ತು ಹಾಗೆ ಪದೇ ಪದೇ ಹಿಕ್ಕೆ ಹಾಕುತ್ತಿರಲಿಲ್ಲ ಎಂದು ಹೇಳಿದ. "ಏನಾದರೂ ದೈಹಿಕ ಊನತೆಯಿಲ್ಲದೇ ಯಾವ ಪಶು-ಪಕ್ಷಿಯೂ ತಾನಾಗಿಯೇ ಮನುಷ್ಯನ ಸಂಪರ್ಕಕ್ಕೆ ಬರಲು ಬಯಸುವುದಿಲ್ಲ" ಎಂಬ ಬಲವಾದ ವಾದ ಮಂಡಿಸಿದ. ಇದಕ್ಕೆ ವಿಜ್ಞಾನದ ಸಾಕ್ಷ್ಯಗಳೂ ದೊರೆಯುವಂತಿತ್ತು ಮತ್ತು ನಾನೂ ಅಪರೂಪಕ್ಕೊಮ್ಮೆಯಂತೆ ಈತ ಲಾಜಿಕಲ್ ಆಗಿ ಏನೋ ಹೇಳ್ತಿದ್ದಾನೆ ಎಂದು ಹೌದೆಂದು ತಲೆಯಾಡಿಸಿದೆ. ಅದರ ಜೊತೆಗೇ ನನಗೂ ಬಿದ್ದು ಏಟಾಗಿದ್ದರಿಂದ ಅವನ ನೆರವೇ ಬೇಕಾಗಿತ್ತು. ಇನ್ನು ಅವನೊಂದಿಗೆ ವಾದ ಮಾಡುವುದು ನನಗೇ ನಷ್ಟವೆಂದು ತಿಳಿದು ಜೊತೆಗೆ ಅವನು ಹೇಳಿದ ಮಾತೂ ಸತ್ಯವೆಂಬುದು ಎರಡನೇ ಕಾರಣವಾಗಿತ್ತು.
ನನಗೆ ಗಾಯವಾಗಿ ಹೇಗೆ ಅವನ ಜರೂರತ್ತು ಇತ್ತೋ ಹಾಗೆಯೇ ಆ ಪಾರಿವಾಳಕ್ಕೂ ಏನಾದರೂ ದೈಹಿಕ ಊನತೆಯಿಂದಾಗಿಯೇ ಅದು ಮನೆಯೊಳಗೆ ಬಂದಿತ್ತಿರಬೇಕೆಂಬ ಸಂಶಯ ಗಟ್ಟಿಯಾಗತೊಡಗಿತು.
ಅದು ಹಿಕ್ಕೆ ಹಾಕಿದಲ್ಲೆಲ್ಲ ಮತ್ತೊಮ್ಮೆ ಬಟ್ಟೆಯಿಂದ ಚೆನ್ನಾಗಿ ಕ್ಲೀನ್ ಮಾಡಿದೆ. ಇನ್ನು ಮುಂದೆ ಹೀಗೆಲ್ಲಾ ಬೆಕ್ಕು ನಾಯಿ ಪಕ್ಷಿಗಳನ್ನೆಲ್ಲಾ ನೋಡದೇ ಮಾಡದೇ ಮೈ ಮೇಲೆ ಬಿಟ್ಟುಕೊಳ್ಳುವುದು ಅಪಾಯ ಎಂಬ ಸಣ್ಣ ಸತ್ಯ ಮನದಟ್ಟಾಗಲು ಜಾಸ್ತಿ ಸಮಯ ಬೇಕಾಗಲಿಲ್ಲ.
ಆದರೂ ನಮಗೆ ಪ್ರಾಣಿ ಪಕ್ಷಿಗಳ ಮೇಲಿನ ಪ್ರೀತಿಯೇನೂ ಕಮ್ಮಿಯಾಗಿಲ್ಲ. ಆದರೆ ಇದೊಂದು ಮಾಹಿತಿಯನ್ನೂ ಎಂದಿಗೂ ನೆನಪಿನಲ್ಲಿಟ್ಟುಕೊಳ್ಳಬೇಕೆಂಬ ಅರಿವು ಮೂಡಿತ್ತು.
ಇಂತದ್ದೇ ಅನುಭವ ಮೊದಲೊಂದು ದಿನ ಬೆಕ್ಕಿನ ಮರಿಯೊಂದು ಬಂದಾಗಲೂ ಆಗಿತ್ತು. ಆದರೆ ಅಂದು ಬರೀ ವಾದ ಮಾಡಿ ಸುಮ್ಮನಾಗಿದ್ದೆವು. ಮರುದಿನ ಓನರ್ ಆಂಟಿ ಬೆಕ್ಕನ್ನು ಹೊಡೆದು ಓಡಿಸಿಬಿಟ್ಟಿದ್ದರು.ಆಗ ರೂಮಿನೊಳಗಿನ ನಮ್ಮ ಪೌರುಷ ಆಂಟಿಯೆದುರು ಅಸಹಾಯಕತೆ ಪ್ರದರ್ಶಿಸಿತ್ತು. ಇಂದಾದರೂ ನನಗೆ ಬಿದ್ದು ಗಾಯವಾಗಿ ಆರೋಗ್ಯದ ಬಗ್ಗೆ ಕಾಳಜಿಯ ಮಹತ್ವ ಮನಸ್ಸಿನಲ್ಲಿ ಮೂಡಿದ್ದರಿಂದ ಇವೆಲ್ಲ ತಲೆಯೊಳಗೆ ಹೋಯಿತಿರಬೇಕೇ ವಿನಃ ಇಲ್ಲದಿದ್ದಲ್ಲಿ ನಮ್ಮ ಅಸಾಧಾರಣ ಪಾಂಡಿತ್ಯ ಪ್ರದರ್ಶನಕ್ಕೆ ಲಗಾಮು ಹಾಕುವವರಾದರೂ ಯಾರಿದ್ದಾರೆ ಹೇಳಿ..? 😬

No comments:
Post a Comment