ಕಣ್ಣಾಯಿಸಿದವರು

Saturday, 26 January 2019

ಕತ್ತಲ ಕನವರಿಕೆಗಳು

ಗೀಚಿದ್ದು

ಆ ರಾತ್ರಿ ಹೇಗೆ ಕಳೆಯಿತೋ
ಒಮ್ಮೊಮ್ಮೆ ಅನಿಸುತ್ತದೆ ಆ
ತಂಗಾಳಿಯ ನಿಶ್ಯಬ್ಧ ಮೌನದ
ಹಿಂದೆ ಅದೇನು ನೋವು
ಅಡಗಿದೆಯೋ ಎಂದೆಲ್ಲ..

ಪಾವನವಾಗುವುದು ಮೈಮನವೆಲ್ಲ
ನಿಗೂಢ ರಾತ್ರಿಗಳಲ್ಲಿ ನಾಲ್ಕು ಗೋಡೆಗಳ
ಬೆಚ್ಚನೆ ಸೂರಿನಡಿ ಮಲಗುವ‌ ಮುನ್ನ
ತಾರಸಿಯ ಹತ್ತಿ ಒಬ್ಬನೇ ಸುತ್ತಲೂ
ನೋಡುತ್ತ‌ ಸುಮ್ಮನೆ ಕುಳಿತಿರುವುದೆಂದರೆ..

ಹಾಗೇ ಒಬ್ಬೊಬ್ಬನೇ ಹಲುಬುವ
ಹುಮ್ಮಸ್ಸು.. ಅದಾವ ಕವಿ ಬರೆದ
ಪದ್ಯಗಳು ಉಸಿರೊಂದಿಗೆ ಬೆರೆತು
ಅರ್ದಂಬರ್ದ ಹೊರಬಂದು ಬಿಡುವವು..
ಅಷ್ಟಕ್ಕಷ್ಟೇ ಮತ್ತೆ ಅದೇ ಕನಸುಗಳ
ಹಾವಳಿ ಶುರುವಾಗುವವು..

ಕೆನ್ನೆ ಸವರುವ ಬೆಳದಿಂಗಳು
ಎದೆ ನಡುಗಿಸುವ ಚಳಿಗಾಳಿ
ಮುತ್ತಿಡುವ ಚಂದ್ರಮನ
ಕಿರುನೋಟ...
ಸುತ್ತ ಒಂದೊಂದೆ ಮಾಯವಾಗುತ್ತ
ನಂದಿಹೋಗುವ‌ ದೀಪಗಳು
ಹೊಸ ಬೆಳಗಿಗೆ ಆದರಿಸಲು
ನಿದ್ರೆಗೆ ಸ್ವಾಗತಿಸುವ ಕಣ್ರೆಪ್ಪೆಗಳು...

Monday, 21 January 2019

ನಮ್ದೂ ಒಂದ್ ಲೈಫು

ಅಡ್ನಾಡಿ ಮನ್ಸು ಅಡ್ಡಡ್ಡ ಯೋಚ್ನೆ
ದಿನಕ್ಕೊಂದ್ ಕನ್ಸು ವಾರಕ್ಕೆರ್ಡ್ ಕೆಲ್ಸ
ಹೆದ್ರೊ ಮನ್ಷ ಇದ್ ಬದ್ ಹಾದಿಲೆಲ್ಲ
ಕದ್ ಕದ್ ಓಡ್ಸು ವಯ್ಸು
ಗಾಳಿ ಬಂದ್ಕಡೆ  ತೂರ್ಕೋ ಅನ್ನು ಬಿಕ್ನಾಸಿ ಐಡಿಯಾಗಳು
ಎಡ್ವ್ದಾಗ್ಲೇ ಬುದ್ಧಿ ಅನ್ನೋ ಜಾಯಮಾನ

ಸಿಟ್ ಬರ್ದೇ ವಂದೆರಡ್ ವರ್ಷ
ಪೀಸ್ ಅಂದ್ರೆ ಕಾಸ್ ಇಲ್ಲ
ಕೆಳ್ಗೆ ಮ್ಯಾಲೆ ಎಲ್ಲಾ ನಮ್ಮವ್ರೆ
ಇದ್ದಲ್ಲೆ ಖುಷಿಯಾಗಿರು
ಬಡ್ವಾ ನೀ ಮಡ್ಗ್ದಂಗಿರು ಅನ್ನೋದು
ಮನಿದೇವ್ರ ಗಾದೆ
ಹಿಂಗಿಂಗೆ ಜೀವ್ನ ರತ್ನನ್ ಪದ್ಗಳೇ ಬಾಯ್ಪಾಠ

ಕೇಳಕ್ ನಾವು ಹೇಳಕ್ ನೀವು
ಮದ್ಯದಲ್ ಒಂದೆರ್ಡು ಬ್ರೇಕು
ತಿಂಗ್ಳಿಗೊಂದ್ ರೋಲು 'ಮಾಡೆಲ್ಲು'
ಸೀರಿಯಲ್ಲು ನೋಡಲ್ಲ ಸೀರೀಸು ಬಿಡದಿಲ್ಲ
ಬಾಡಿಗೆ ಕಟ್ಟೋಕ್ ಕಾಸಿಲ್ಲ ಮೂವಿಗ್ ಮಾತ್ರ ಲೇಟಿಲ್ಲ
ಚೂರ್ ಹೆಚ್ಚು ಚೂರ್ ಕಮ್ಮಿ
ಕಮಿಟ್ಮೆಂಟ್ ಇಲ್ದಿರೋ ಜೀವ್ನಕ್ಕೆ
ಅಡ್ಜಸ್ಟ್ಮೆಂಟ್ ಅಲ್ಲೇ  ಬದ್ಕು ಅನ್ನೋ ಪಾಲಿಸಿ... 

Sunday, 20 January 2019

ಸೂರ್ಯನಿಗೆ ಸೂತಕ

 ಗೀಚಿದ್ದು

ಇಂಚಿಂಚು ಸರಿಯುತ್ತ
ಹೊತ್ತು ಕಳೆಯುವಾಗ ಕತ್ತಲಂತೆ
ಕರಿಮುಗಿಲು ಕಾಲವಂತೆ
ಮುಖದ ಮೊಡವೆಯ ಕೆಂಪು
ಬಾನ ರಂಗೇರಿದಾಗ
ಸೂರ್ಯನಿಗೆ ಸೂತಕವಂತೆ

ಚಕ್ರ ಉರುಳುತ್ತಲೇ ಇದೆ
ತಾನಲ್ಲದ ತಾನೆಂಬಂತೆ
ಬದುಕು,ಜೀವ,ಕಡಲ ಒಡಲೊಳಗೆ
ಕಳೆದು ಹೋದಂತೆ, ಬೀದಿ ಬದಿಯ ದೀಪ
ರಸ್ತೆಗಳ ರಂಗೇರಿಸಿದಾಗ
ಸೂರ್ಯನಿಗೆ ಸೂತಕವಂತೆ

ನಿಂತ ಚಕ್ರ ನಿಂತಲ್ಲಿ ನಿಂತಿದೆ
ಹಳೆಯ ಮಾಮರಕೆ ಹೊಸ ಕೋಗಿಲೆಯ
ಸ್ಪರ್ಶವನರಸುತ್ತಲೇ
ಚೈತ್ರಕ್ಕೆ ಕಾಯುವ ಕೆಲಸ
ಮಳೆಮೋಡದ ಹಾಯುವಿಕೆಗೆ ಇಳೆಯರಿಸಿದ ಹಾಗೆ
ಬೆಳದಿಂಗಳು ಇನ್ನೇನು ಬರಬಹುದು
ವಾರ್ತೆಯನು ಹೊತ್ತು ಸೂರ್ಯನಿಗೆ ಸೂತಕವಂತೆ


Thursday, 3 January 2019

ಚಿರವಿರಹಿಯ ಬರಹ

ತೋಚಿದ್ದ ಗೀಚಿದ್ದು

ನಾಲಿಗೆಯೂ ಎಡವಿತ್ತು
ಮೂಕವೇದನೆಯ ತಾಪಕ್ಕೆ
ಅರೆಬೆಂದ ಹೃದಯಗಳ ಸಾಮಿಪ್ಯದಿ
ಸೃಷ್ಟಿಯ ಹಿತ್ತಲಿನಲ್ಲಿ ಹುಟ್ಟಿದ
ವಿಸ್ಮಯಗಳ ಪೋಣಿಸುತ್ತ

ಕಪ್ಪುಹಲಗೆಯಲಿ ಕರ್ಕಶ ದನಿ ಮಾಡಿದ
ಕಡುಗಳೇ ಸಹಪಾಠಿಯ ನಿದ್ರೆಗೆಡಿಸಿದ್ದು
ನಿನ್ನೆಗಳಲಿ ಜನಿಸಿದ ನ್ಯೂಟನ್ನನ ಗುರುತ್ವಕ್ಕೂ
ನಿನ್ನಗುವಿನಿಂದ ಒಂದಿಂಚು ಹಿಂದೆಯೇ ತಳಸ್ಪರ್ಷಿಸುವ ಕಳ್ಳನೋಟಗಳಿಗೂ ಸಂಪರ್ಕ ಕಲ್ಪಿಸುವ ಕಳಪೆ ಕಾಮಗಾರಿಯ ಸೇತುವೆಯೇ ಕೊನೆಗೊಮ್ಮೆ
ತೀಕ್ಷ್ಣ ಜವಾಬ್ದಾರಿಯ
ಯಜಮಾನಿಕೆ ಹೊತ್ತಿದ್ದವು .

ಪಿತ್ರಾರ್ಜಿತವಾಗಿ ಬಂದಿದ್ದ ಲೆಕ್ಕದ ಪಟ್ಟಿಯ
ಉಳಿದ ಕೊನೆಯ ಎರಡು ಹಾಳೆಗಳು ಮಾತ್ರ
ಆಕಸ್ಮಿಕವಾಗಿ ಹೇಳುತ್ತಿತ್ತು ನನ್ನಜ್ಜನ ಯೌವನದ
ಕಿತಾಪತಿಗಳ ಒಂದೊಂದಾಗಿ ಮೊನ್ನೆ ಹೊಲಿಸಿದ ನೀಲಿ
ಜುಬ್ಬದ ಮೇಲಿನ ಕಸೂತಿಯಂತೆ

ಬಿರುಮಳೆಗೆ ಇನ್ನೇನು ಕುಸಿಯುವ ಹಂತ
ತಲುಪಿದ್ದ ಗೋಡೆಗಳು ಕಾಲವನೆಣಿಸುತ್ತಲೇ
ಹನಿಗಳನು ಕುಡಿಯುತ್ತಿತ್ತು
ಮನೆಯೊಡೆಯುವುದರೊಳಗೆ ಮೊನ್ನೆ ತಾನೆ ಮಿಂದ
ಮಗಳ ಕಳಿಸಿಕೊಟ್ಟೇನೆಂದು.

ತೈಲವೆರೆಯುವ ಕೈಯ ಕಾಣದೆ
ವಾರಗಳೇ ಕಳೆದಂತಾದಾಗ
ಹೆಬ್ಬಾಗಿಲ ಬುಡದಲ್ಲಿನ
ಕಿರುಹಣತೆ ಕಪ್ಪು ಕಾಣುತ್ತಿತ್ತು..
ಹದಿನಾಲ್ಕರ ಬಾಲೆಗೆ ಮುತ್ತೈದೆಯ ಕನಸು
ಬೀಳಲಾರಂಭಿಸಿತ್ತು..!!

ಸದ್ಯದ ಬರ್ಯಾಣ

DEJA-VU

ಕಾನೂರಿನಲ್ಲಿ ಇಂತಾ ಫಟಿಂಗರ ಸಂಖ್ಯೆ ತುಂಬಾ ಏನಿಲ್ಲ‌. ವೆಂಕಣ್ಣ ಅಂತ ಮಹಾಫಟಿಂಗರ ಸಾಲಿಗಂತೂ ಸೇರಿಸೋದಕ್ಕೆ ಲಾಯಕ್ಕಿಲ್ಲ. ಅವನ ಕರಾಮತ್ತು ಹೇಳಿಕೊಳ್ಳುವಂತ ಘನಾಂದಾರಿದು ಅ...

ಟಾಪ್ ಓದಾಣ