ಅಂದಾಜು ಮಾಡಿದ್ರಿ ಅಂತಾಯ್ತು.. ವೆಂಕಣ್ಣ ಭಾಳ ನೀಟಾದ ಮನುಷ್ಯ ಅಂತೂ ಹೌದು. ಸಂಡಾಸಿಗೆ ಅರ್ಧ ಗಂಟೆ ಮೀಯುದಕ್ಕೆ ಮುಕ್ಕಾಲು ಗಂಟೆ ಇಷ್ಟಾದಮೇಲೆ ಕನ್ನಡಿ ಮುಂದೆ ನಿಂತ್ಕೊಂಡು ತಲೆ ಬಾಚಿದಂಗೆ ಸಿಗೋ ಒಂದೊಂದೇ ಬೆಳಿಕೂದಲನ್ನ ಕಿತ್ತು ತೆಗೆದರೂ ಅವನ ತಲೆ ಇನ್ನೂ ಅರ್ಧ ಕಾಲಿ ಆಗದೇ ಇನ್ನರ್ಧ ಉಳಿದುಕೊಂಡಿದೆ ಅನ್ನೋದು ವಾಪಸ್ ಬರೋದಕ್ಕಿರೋ ವಿನಾಯಕನಿಗೆ ಅಪ್ಪನ ಗುರುತು ಸಿಗದಂತಾಗದಿರಲಿ ಎಂದಂತೆ. ಇದನ್ನ ನಾನೇನು ಹೇಳುದಿಲ್ಲ .. ಅವನೇ ಯಾವಾಗಲಾದ್ರೂ ಯಲ್ಲಾಪುರದ ಕಡೆಗೆ ಹೋದರೆ ಹಜಾಮನತ್ರ ಹೋಗಿ ತಲೆಗೆಲ್ಲ ಕಪ್ಪು ಬಣ್ಣ ಹಚ್ಚಿ ಮೂವತ್ತರ ಹುಡುಗನಂತೆ ಮಾಡಿಕೊಂಡು ಬರುವಾಗ ದಾರಿಲಿ ಸಿಕ್ಕಿ ಮದುವೆ ನಿನಗೋ ಅಥವಾ ನಿನ್ನ ಮಗನಿಗೋ ಅಂತ ಕೇಳಿದರೆ "ನನ್ನ ಮಾಣಿ ಬೆಂಗಳೂರಿಗೆ ಹೋಗಿ ನಾಲ್ಕೈದ್ ವರ್ಷಕ್ಕೆ ಬಂತ್ರ.. ವಾಪಸ್ ಬಂದ್ರೆ ಇವನೇ ನನ್ನಪ್ಪ ಅಂತ ಹೇಳುದಕ್ಕೆ ಅವಂಗೆ ಆಯಿ ಇಲ್ಲೆ ನೋಡಿ. ಅದ್ಕೇ ಅವ ಹೋಗಕಿದ್ರೆ ಹೆಂಗಿದ್ನೋ ಹಂಗೇ ಇರವಲ್ದ..?" ಎಂದು ಕೇಳ್ತಾನೆ ಪುಣ್ಯಾತ್ಮ. ಹೋಗಲಿ ಪಾಪ! ಹೆಂಡತಿ ಗಿರಿಜೆ ಬಾಳ ಬೇಗ ಇವನನ್ನ ಬಿಟ್ಟು ಹೋದಳು. ಮಾಣಿ ವಿನಾಯಕ ಇನ್ನೂ ಸಣ್ಣವ ಇದ್ದ. ಮೂರೋ ನಾಲಕ್ಕೋ ವರ್ಷದವನಾಗಿದ್ದ ಅಷ್ಟೇ. ಮತ್ತೆ ಮದುವೇ ಆಗೋದಕ್ಕೂ ವೆಂಕಣ್ಣ ತಯಾರಾಗಲಿಲ್ಲ ಅನ್ನೋದು ಈಗ ಅವನಿಗೆ ಹೆಮ್ಮೆ ಅನಿಸಿದರೂ ಅವನಂತ ಅಂಡಪಿರ್ಕಿಗೆ ಒಂದು ಹೆಣ್ಣು ಕೊಟ್ಟಿದ್ದೇ ಹೆಚ್ಚು, ಎರಡನೇ ಮದ್ವೆಗೆ ಹೆಣ್ಣು ಕೊಡೋ ತಂದೆ ಈ ಭೂಮಿ ಮ್ಯಾಲೆ ಇಲ್ಲೆ ಎಂದು ಇಪ್ಪತ್ತು ವರ್ಷದ ಹಿಂದೇ ಅಕ್ಕಪಕ್ಕದವರು ಆಡಿಕೊಳ್ತಿದ್ದರು. ಗಿರಿಜೆ ಸತ್ತದ್ದು ಮಾತ್ರ ಪಾಪ ಅದೇನಾಗಿತ್ತೋ ಕೊನೆಗೂ ಗೊತ್ತಾಗಲಿಲ್ಲ. ಒಂದು ತಿಂಗಳಿಂದ ಹೊಟ್ಟೆನೋವು ಅಂತಿದ್ದಳಂತೆ. ವೆಂಕಣ್ಣ ಹೇಳಿದ್ದೇ ಕರೆ. "ಆಸ್ಪತ್ರೆಗಾದ್ರೂ ತಗಂಡೋಗ್ರೋ.. ನಾ ಈ ಮನೆಲಿ ಸಾಯ್ತ್ನಿಲ್ಲೆ. ಪ್ರಧಾನಬಾಗಿಲ ಹೊರ್ಗಾದ್ರೂ ಮನಗಿಸ್ರೋ " ಗೋಳೋ ಅಂತ ಕೋಣೆ ಒಳಗಿಂದ ಕೂಗೋದು ಅಂಗಳದಿಂದ ಓಡಾಡುವಾಗ ಕೇಳ್ತ್ತಿತ್ತು ಎಂದು ಆಳುಕಾಳುಗಳು ಹೇಳುತ್ತಿದ್ದರು. ಹೊಟ್ಟೆನೋವು ಎಂದು ಕಷಾಯ ಕುಡಿತಿದ್ದೆ ಅಂದಿದ್ದಳಂತೆ. ಜಾಸ್ತಿ ದಿನ ಉಳಿಯಲಿಲ್ಲ. 'ಅದೇನು ಗೆಡ್ಡೆ ಬೆಳೆದಿತ್ತೋ ಏನೋ ಆಪರೇಷನ್ ಆದ್ರೂ ಮಾಡಿದ್ರೆ ಬದುಕ್ತಿತ್ತೇನೋ ಪಾಪ ಗಿರಿಜಮ್ಮನೋರು' ಅಂದು ತಿಮ್ಮು ಆಗಾಗ ವೆಂಕಣ್ಣನನ್ನು ಕಂಡಾಗೆಲ್ಲ ಗಿರಿಜೆಯನ್ನು ನೆನೆದು ಬಣಬಣಿಸುತ್ತಾಳೆ.
ಗಿರಿಜೆ ಸಾಯೋದಕ್ಕೆ ಎರಡು ದಿನ ಮೊದಲು ವೆಂಕಣ್ಣ ಅಡಿಕೆ ಕೊಟ್ಟು ಬರುತ್ತೇನೆಂದು ಮನೆಯಲ್ಲಿ ಅದೇ ಕೆಲಸದಾಳು ಪಾಯ್ಕು ಇದ್ದಾನಲ್ಲ ಅವನ ಹೆಂಡ್ತಿ ತಿಮ್ಮು ಇದ್ದಾಳಲ್ಲ. ಅವಳತ್ರ ಮನೆಕಡೆಗೆಲ್ಲ ನೋಡ್ಕ ಅಂತ ಹೇಳಿ ಯಲ್ಲಾಪುರಕ್ಕೆ ವಕಾರಿಗೆ ಹೋದವ ಸಂಜೆಯಾದರೂ ಬರಲೇ ಇಲ್ಲ. ಖಾನವಳಿಯಲ್ಲಿ ಉಳಿದಿದ್ದ ಅನ್ನುವ ವಿಚಾರ ಆಮೇಲೆ ವಿನಾಯಕನಿಂದ ಗೊತ್ತಾದರೂ ಅವನು ಬರದೇ ಗಿರಿಜೆಗೆ ಅನ್ನ ಬೇಯಿಸಿ ಹಾಕುವವರಾದ್ರೂ ಯಾರು ಹೇಳಿ.?
ತಿಮ್ಮು ಸಂಜೆಯ ಹೊತ್ತಿಗೆ ಕೊಟ್ಟಿಗೆಲಿದ್ದ ಒಂದು ಬರಡು ದನಕ್ಕೆ ಹುಲ್ಲು ಕಲಗಚ್ಚು ಕುಡಿಸಿ 'ಮನೆಗೆ ಹೋವ್ತೆ ಬಡ್ತೇರೆ ನೋಡ್ಕಳಿ ಮತ್ತೆ.. ಜೋಪಾನ' ಎಂದು ಹೇಳಿ ಹೋದವಳು ಪಾಯ್ಕು ಮನೆಗೆ ಬರಲಿಲ್ಲ ಅಂತ ಒಬ್ಬನೇ ತನ್ನ ಕೂಸೊಂದಿಗೆ ಹಟ್ಟಿಯಲ್ಲಿ ಮಲಗಲು ಹೆದರಿಕೆಯಾಗಿ ಅವಳನ್ನೂ ಹೊತ್ತುಕೊಂಡು ರಾತ್ರೆ ಎಂಟರ ಹೊತ್ತಿಗೆ ವಾಪಸ್ಸು ವೆಂಕಣ್ಣನ ಮನೆಗೇ ಬಂದಳಂತೆ. ಇಷ್ಟು ಹೊತ್ತಾದರೂ ಮನೆಯಲ್ಲಿ ಬೆಳಕು ಹಚ್ಚಿಲ್ಲ, ಬಾಗಿಲು ದೀಪ ಹೊತ್ತಿಸಿಲ್ಲದ್ದರಿಂದ ಕಾನೂರಿಗೆ ಬರುವ ಕೊನೆಯ ಗಾಡಿಗೂ ವೆಂಕಣ್ಣಯ್ನೋರು ಬಂದಿಲ್ಲ ಎಂಬುದು ಅವಳಿಗೆ ಖಾತರಿಯಾಗಿ ತಾನು ಬಂದದ್ದು ಭಾಳ ಒಳ್ಳೆದಾಯಿತೆಂದು ಹೊರ ಜಗುಲಿಯಿಂದಲೇ ಕೂಗಿ ಕರೆದಳು,
"ಗಿರಿಜಮ್ಮೋರೆ, ಹೋಯ್..."
ಗಿರಿಜೆ ಇನ್ನು ಎದ್ದು ಬರುವಷ್ಟಿರಲಿಲ್ಲ. ಕೋಣೆಯೊಳಗಿಂದ ಮಲಗಿದ್ದ ಮಂಚದಿಂದಲೇ ಆದಷ್ಟು ಧ್ವನಿಯೆತ್ತರಿಸಿ "ಅವರು ಇನ್ನೂ ಬೈಂದ್ವಿಲ್ಲೇ ಅಂತ ಕಾಣ್ತು ತಿಮ್ಮು, ನೀನೇ ಒಂದು ಲೋಟ ಗಂಜಿನಾದ್ರೂ ಬೇಯ್ಸಾಕ್ತ್ಯ ಮಾತ್ರ.. ನೀ ಊಟ ಮಾಡ್ಕ ಬಂದ್ಯ ಇಲ್ಯ..?" ಎನ್ನುತ್ತಲೇ ತಕ್ಷಣ ಏದುಸಿರಿನಿಂದ ಬರುವುದರಲ್ಲಿದ್ದ ಕೆಮ್ಮನ್ನು ತಡೆಹಿಡಿದುಕೊಂಡಳು.
ತಿಮ್ಮು ಗಿರಿಜಮ್ಮನವರ ಧ್ವನಿ ಕೇಳಿಯೆ ಅವರ ಪರಿಸ್ಥಿತಿ ಅಂದಾಜಿಸಿದವಳು ಆದರೂ ಕೊಂಚ ಹಿಂಜರಿಕೆ ಮತ್ತು ಅನುಮಾನದಿಂದ ಕೇಳಿದಳು " ಅಮ್ಮನೋರೆ ಏನು ಹೇಳ್ತಾ ಇದ್ದೀರ ನೀವು? ನಾನು ಗಂಜಿ ಮಾಡಿಹಾಕಿದ್ರೆ ನೀವು ಮುಟ್ತೀರ? ಬ್ಯಾಡ ಬ್ಯಾಡ ಶಾರದಕ್ಕನ ಮನೆಗೆ ಹೋಗಿ ಅವ್ವಾವ್ರನ್ನ ಇಲ್ಲ ಸಾವಿತ್ರಕ್ಕನ ಕರ್ಕಂಡು ಬರ್ತೀನಿ ಇರಿ.." ಅನ್ನುವಾಗಲೇ ಗಿರಿಜೆ ಮತ್ತಷ್ಟು ಕೆಮ್ಮುತ್ತಾ ಹೆಣಗಾಡುತ್ತ ಎದ್ದು ಜಗುಲಿಯ ಬಳಿ ಬಂದು ಲೈಟು ಹಚ್ಚಿ ಗೋಡಗೊರಗಿ ಕುಸಿದು ಬಿದ್ದಳು. ಅದನ್ನು ಕಂಡದ್ದೇ ತಡ ತಿಮ್ಮು ಹಿಂದೆ ಮುಂದೆ ನೋಡದೆ ಒಳಗೆ ನುಗ್ಗಿ ಅವರನ್ನು ಕೈಗಳಿಂದ ಹಿಡಿದು ಹಣೆ ತಟ್ಟಿ ನಿಧಾನಕ್ಕೆ ಎಚ್ಚರ ತಪ್ಪದಂತೆ ಮಾತಾಡಿಸುತ್ತ ಮರಳಿ ಮಂಚವಿರುವ ಕೋಣೆಗೆ ಕರೆದುಕೊಂಡು ಹೋಗಿ ಮಲಗಿಸಿದಳು. ಸುಧಾರಿಸಿಕೊಳ್ಳುತ್ತಿದ್ದ ಗಿರಿಜೆ ' ಆಗ್ತ್ಲೆ ತಿಮ್ಮು ಇನ್ನಾಗ್ತ್ಲೆ ನನ್ನತ್ರ. ನೀ ಗಂಜಿ ಬೇಯಿಸಿ ಕೊಟ್ರೆ ನೆಮ್ಮದಿಯಿಂದ ನಿದ್ರೆ ಮಾಡ್ತೆ. ನಾಳಿನ ಬೆಳಕು ಕಾಣು ಯೋಗ ಇದ್ರೆ ಇರ್ತೆ. ಇಲ್ಲದ್ರೆ ಅಷ್ಟೇ.." ಅನ್ನುವುದರಲ್ಲೇ ತಿಮ್ಮು ಗಡಿಬಿಡಿಯಿಂದ ಮತ್ತೇನನ್ನೂ ಯೋಚಿಸದೇ ಅಡಿಗೆ ಮನೆಗೆ ಹೋಗಿ ಒಂದು ಲೋಟ ಅಕ್ಕಿ ತೊಳೆದು ನೀರು ಹಾಕಿ ಒಲೆಗೆ ಸೌದೆ ಒಟ್ಟುತ್ತ ಬೆಂಕಿ ಹೊತ್ತಿಸಿ ಗಂಜಿಗೆ ಇಟ್ಟಳು. ಬೆಂಕಿ ಎಂದಿಗಿಂಲೂ ತುಸು ಜೋರಾಗೇ ಉರಿದಂತಿತ್ತು. ಬೆಳಕು ಅಡಿಗೆ ಕೋಣೆಯಿಂದ ಗಿರಿಜೆ ಮಲಗಿದ್ದ ಕೋಣೆಯೊಳಗೆ ಸರಾಗವಾಗಿ ಹರಿಯುತಿತ್ತು. ಅದೇ ಮಂಚದಲ್ಲಿ ತಿಮ್ಮುವೂ ಗಿರಿಜೆಯ ಕಾಲೊತ್ತುತ್ತ ಕೂತಳು. ನಾಲ್ಕು ವರ್ಷದ ಮಗು ಮಂಗಲೆ ಒಲೆಯ ಸೌದೆ ಸರಿಸುತ್ತ,ಕಿಡಿಯೆಬ್ಬಿಸುತ್ತ ಬೆಂಕಿ ಬಿಸಿ ತೆಗೆದುಕೊಳ್ಳುತ್ತಿದ್ದಳು.
ತಿಮ್ಮು ಅಂದು ನಡೆದದ್ದನ್ನ ಯಾರೊಂದಿಗೂ ಹೇಳದೆ ಒಳಗೇ ಬಚ್ಚಿಟ್ಟುಕೊಂಡಿದ್ದಳು. ಎಲ್ಲಾದರೂ ತಾನು ಗಂಜಿ ಬೇಯಿಸಿಕೊಟ್ಟದ್ದು ಗೊತ್ತಾದರೆ ಏನು ಮಾಡಿಯಾರೋ ಎಂದು ಭಯದಲ್ಲೇ ಆಕೆ ದಿನದೂಡಿದ್ದಳು. ಮತ್ತೊಂದೇ ದಿನ ಅಷ್ಟೇ ಗಿರಿಜೆ ಬದುಕುಳಿದದ್ದು. ಅದರೊಳಗೆ ವೆಂಕಣ್ಣ ಎಮ್ಮೆಮೇಲೆ ವಿನಾಯಕನನ್ನು ಕೂರಿಸಿಕೊಂಡು ಮಧ್ಯಾನ್ನದ ಹೊತ್ತಿಗೆ ಮನೆಕಡೆ ಬಂದುಮುಟ್ಟಿದ್ದ.
ಈಗ ಮಂಗಲೆಗೆ ಮಾತ್ರ ಮೂರ್ನಾಲ್ಕು ದಿನಕ್ಕೊಮ್ಮೆ ವೆಂಕಣ್ಣ ನೆಲ ಒರೆಸುವುದಕ್ಕೆಂದು ಕೋಣೆಯಿಂದ ಸನ್ನೆ ಮಾಡುವಾಗ ಅಸ್ಪಷ್ಟವಾಗಿ ತಾನು ಮನೆಯ ಒಳಾಂಗಣದ ಆವರಣವನ್ನೆಲ್ಲ ಮೊದಲೇ ನೋಡಿದಂತೆಯೂ ಅನಿಸಿ ಮಂಚದ ಮೇಲೂ ಕೆಳಗೂ ಎಲ್ಲ ನೀಟಾಗಿ ಒರೆಸಿ ಎದ್ದುಬರುವಾಗ ಕಾಯಲೆಯಿಂದ ಮಲಗಿರುವ ಗಿರಿಜಮ್ಮನವರ ಚಿತ್ರವಷ್ಟೇ ಕಣ್ಮುಂದೆ ಬರುತ್ತಿದ್ದವು.
--RATEESH HEBBAR

